

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯನ್ನು ಸಿಮ್ಸ್(ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ)ನಿಂದ ಬೇರ್ಪಡಿಸಿ ಸ್ಥಳಾಂತರ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾವ ಕಾರಣಕ್ಕೂ ಆಸ್ಪತ್ರೆಯನ್ನು ಸ್ಥಳಾಂತರ ಮಾಡಬಾರದು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದರು.
ನಗರದಲ್ಲೇ ಬೇರೆಡೆ ಅಥವಾ ಬೇರೆ ತಾಲೂಕಿನಲ್ಲಿ ಸ್ಥಾಪನೆ ಮಾಡುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆದರೆ ಆಸ್ಪತ್ರೆಗೆ ಈಗಿರುವಷ್ಟು ಸುಸಜ್ಜಿತ ಜಾಗ, ಜನರಿಗೆ ಅನುಕೂಲ ಹಾಗೂ ಹತ್ತಿರವಾಗುವಷ್ಟು ಸ್ಥಳ ಬೇರೊಂದಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದೆಯೇ ಮೆಗ್ಗಾನ್ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಸ್ಥಳಾಂತರಿಸಲು ಒತ್ತಾಯ ಕೇಳಿಬಂದಿತ್ತು. ಆದರೆ ಅದಕ್ಕೆ ಜಿಲ್ಲೆಯ ಜನತೆ ಅವಕಾಶ ನೀಡಿರಲಿಲ್ಲ. ಇದೀಗ ಮತ್ತೆ ಚರ್ಚೆಗಳು ಮುನ್ನೆಲೆಗೆ ಬಂದಿದೆ. ಮೆಗ್ಗಾನ್ ಆಸ್ಪತ್ರೆಗೆ ಪ್ರತಿದಿನ ಸಾವಿರಾರು ಹೊರರೋಗಿಗಳು ಬಂದು ಹೋಗುತ್ತಾರೆ. ನೂರಾರು ಮಂದಿ ದಾಖಲಾಗುತ್ತಾರೆ. ಅಕ್ಕಪಕ್ಕದ ಜಿಲ್ಲೆಗಳಿಂದಲೂ ಚಿಕಿತ್ಸೆಗೆ ಬರುತ್ತಾರೆ.ನುರಿತ ವೈದ್ಯರು ಮತ್ತು ಸಿಬ್ಬಂದಿ ಇಲ್ಲಿದ್ದಾರೆ. ಹಾಗಾಗಿ ಮೆಗ್ಗಾನ್ ಆಸ್ಪತ್ರೆಯನ್ನು ಸ್ಥಳಾಂತರ ಮಾಡದೆ ಮೇಲ್ದರ್ಜೆಗೇರಿಸಬೇಕಿದೆ ಎಂದು ಒತ್ತಾಯಿಸಿದರು.
ಕೆಎಫ್‌ಡಿಗಿಲ್ಲ ಸೂಕ್ತ ಚಿಕಿತ್ಸೆ
ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರತಿ ವರ್ಷ ಕೆಎಫ್‌ಡಿ ಕಾಣಿಸಿಕೊಳ್ಳುತ್ತಿದೆ. ಕೆಲವರು ಮೃತಪಟ್ಟಿದ್ದಾರೆ. ಕೆಎಫ್‌ಡಿಗೆ ಸೂಕ್ತ ಚಿಕಿತ್ಸೆ ಇಲ್ಲ, ಉಪ ನಿರ್ದೇಶಕರ ಹುದ್ದೆಯನ್ನೂ ತೆರವುಗೊಳಿಸಿದೆ. ಈ ಮೂಲಕ ನಾಲ್ಕು ಜಿಲ್ಲೆಗಳಲ್ಲಿನ ಕೆಎಫ್‌ಡಿ ನಿಯಂತ್ರಣಕ್ಕೆ ಮುಂದಾಗುತ್ತಿದ್ದ ಉಪ ನಿರ್ದೇಶಕರ ಹುದ್ದೆಯ ಶಕ್ತಿಯನ್ನು ಸರ್ಕಾರ ಕಿತ್ತುಕೊಂಡಿದೆ ಎಂದು ಕೆ.ಬಿ.ಪ್ರಸನ್ನಕುಮಾರ್ ಕಿಡಿಕಾರಿದರು.