

ಹುಬ್ಬಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒತ್ತಡ ಕಡಿಮೆ ಮಾಡಲು ಸಮೀಪದಲ್ಲಿ ಮತ್ತೊಂದು ವಿಮಾನ ನಿಲ್ದಾಣ ಮಾಡಲು ಹೊರಟಿರುವುದು ಸರಿಯಲ್ಲ. ಬದಲಾಗಿ ಉತ್ತರ ಕರ್ನಾಟಕದ ಹುಬ್ಬಳ್ಳಿಯನ್ನು ರಾಜ್ಯ ಸರ್ಕಾರ ಆಯ್ದುಕೊಳ್ಳಬೇಕೆಂದು ಇಲ್ಲಿನ ಉದ್ಯಮಿಗಳು, ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.
ಇಲ್ಲಿಯ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂದ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಮುಖರ ಸಂವಾದ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ಮಂಡಿಸಲಾಗಿದೆ.
ಕರ್ನಾಟಕ ಸರ್ಕಾರವು ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರಿನಲ್ಲಿಯೇ ನಿರ್ಮಿಸುವ ಬದಲು ಈಗಾಗಲೇ ಹುಬ್ಬಳ್ಳಿಯಲ್ಲಿ ಲಭ್ಯವಿರುವ 927 ಎಕರೆ ವಿಮಾನ ನಿಲ್ದಾಣವನ್ನೇ ಮೇಲ್ದರ್ಜೆಗೆ ಏರಿಸಬೇಕು. ಇದರಿಂದ ಬೆಂಗಳೂರಿನ ಹತ್ತಿರ ಸುಮಾರು 5ಸಾವಿರ ಎಕರೆ ಸ್ವಾಧಿನ ಪಡಿಸಿಕೊಳ್ಳುವ ಹೊರೆ ತಪ್ಪಿಸಬಹುದು. ಅಪಾರ ಪ್ರಮಾಣದ ಕೃಷಿ ಭೂಮಿ, ಗಿಡಮರಗಳು ಹಾಗೂ ಪ್ರಾಣಿ ಸಂಕುಲ ನಾಶ ತಡೆಯಬಹುದು.
ಇದೆಲ್ಲದಕ್ಕೂ ಮುಖ್ಯವಾಗಿ ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯಗಳನ್ನು ಗಣ್ಯರು ತಿಳಿಸಿದರು.
ಈ ವಿಚಾರಕ್ಕೆ ಸಂಘ ಸಂಸ್ಥೆಗಳು ಒಕ್ಕೋರಲಿನ ಸಹಮತ ವ್ಯಕ್ತಪಡಿಸಿವೆ. ಇದನ್ನು ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಲಾಯಿತು. ಒಂದು ವೇಳೆ ಸರ್ಕಾರ ಕಿವಿಗೊಡದೇ ಹೋದರೆ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಣಯಿಸಲು ಮತ್ತೊಮ್ಮೆ ಸಭೆ ಸೇರಲು ನಿರ್ಧಾರ ಕೈಗೊಳ್ಳಲಾಯಿತು.
ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಗಿರೀಶ ನಲವಡಿ ಅಧ್ಯಕ್ಷತೆ ವಹಿಸಿದ್ದರು. ಸಂದ ಗೌರವ ಕಾರ್ಯದರ್ಶಿ ಶಂಕರ ಹಿರೇಮಠ, ಮಾಜಿ ಅಧ್ಯಕ್ಷ ಜೆ.ಸಿ. ಮಠದ, ಉಪಾಧ್ಯಕ್ಷ ಅಶೋಕ ಕುನ್ನೂರ, ಖಜಾಂಚಿ ರಮೇಶ ಯಾದವಾಡ, ಭರತ ಕುಲಕರ್ಣಿ ಇತರರು ಇದ್ದರು.
ನಗರದ ಹಿರಿಯ ಉದ್ಯಮಿಗಳು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ- ಪದಾಧಿಕಾರಿಗಳು, ರೋಟರಿ ಮತ್ತು ಲಯನ್ಸ ಕ್ಲಬ್, ಆಕಿರ್ಟೆಕ್ಟ್ ಅಸೋಸಿಯೇಶನ್, ಕರ್ನಾಟಕ ಮಟೇರಿಯಲ್ ಟೆಸ್ಟಿಂಗ್ ರೀಸರ್ಚ್ ಸೆಂಟರ್, ಎಪಿಎಂಸಿ ವ್ಯಾಪಾರಸ್ಥರು, ತಾರಿಹಾಳ, ರಾಯಾಪುರ ಮತ್ತು ಗಾಮನಗಟ್ಟಿ ಕೈಗಾರಿಕಾ ವಸಾಹತು, ಚಾರ್ಟರ್ಡ ಅಕೌಂಟೆಂಟ್ ಅಸೋಸಿಯೇಶನ್, ಐಎಂಎ, ಸಿವಿಲ್ ಇಂಜಿನಿಯರ್ಸ್, ಡೆಂಟಿಸ್ಟ್ ಅಸೋಸಿಯೇಶನ್ ಸೇರಿ 13 ಸಂ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.