ಬೇಗೂರು-ನಿಡವಂದ ರಸ್ತೆ ಮೇಲ್ದರ್ಜೆಗೆ

ಬೇಗೂರು-ತ್ಯಾಮಗೊಂಡ್ಲು-ನಿಡವಂದ ರಸ್ತೆಯನ್ನು ನಾಲ್ಕುಪಥಕ್ಕೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಸಚಿವ ಸತೀಶ್ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು. ಶಾಸಕ ಎನ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಸಿ.ಆರ್.ಗೌಡ, ನಾರಾಯಣಗೌಡ, ಪ್ರಕಾಶ್‌ಬಾಬು, ವಜ್ರಗಟ್ಟೆ ನಾಗರಾಜ್, ಹನುಮಂತೇಗೌಡ, ಜಗದೀಶ್ ಇದ್ದರು.
ಬೇಗೂರು-ತ್ಯಾಮಗೊಂಡ್ಲು-ನಿಡವಂದ ರಸ್ತೆಯನ್ನು ನಾಲ್ಕುಪಥಕ್ಕೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಸಚಿವ ಸತೀಶ್ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು. ಶಾಸಕ ಎನ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಸಿ.ಆರ್.ಗೌಡ, ನಾರಾಯಣಗೌಡ, ಪ್ರಕಾಶ್‌ಬಾಬು, ವಜ್ರಗಟ್ಟೆ ನಾಗರಾಜ್, ಹನುಮಂತೇಗೌಡ, ಜಗದೀಶ್ ಇದ್ದರು.
Published on

ಚತುಷ್ಪಥ ಕಾಮಗಾರಿಗೆ ಸಚಿವ ಸತೀಶ್ ಜಾರಕಿಹೊಳಿ ಭೂಮಿಪೂಜೆ-ಶಾಸಕ ಶ್ರೀನಿವಾಸ್ ಉಪಸ್ಥಿತಿ

ತ್ಯಾಮಗೊಂಡ್ಲು: ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಎಲ್ಲ ಹಣವನ್ನು ಗ್ಯಾರಂಟಿಗಳಿಗೆ ಉಪಯೋಗಿಸುತ್ತಿದ್ದಾರೆ ಎನ್ನುವ ವಿರೋಧ ಪಕ್ಷದವರ ಮಾತಲ್ಲಿ ಹುರುಳಿಲ್ಲ. ಯೋಜನೆಗಳಿಗೆ ಬಜೆಟ್‌ನಲ್ಲಿ ಪ್ರತ್ಯೇಕ ಹಣ ತೆಗೆದಿರಿಸಲಾಗಿದ್ದು, ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆ ಇಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೇಗೂರು-ತ್ಯಾಮಗೊಂಡ್ಲು-ನಿಡವಂದ ರಸ್ತೆಯನ್ನು ಚತುಷ್ಪಥವನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ತ್ಯಾಮಗೊಂಡ್ಲು ದೇವರಾಜ್ ಮೊದಲಿಯಾರ್ ವೃತ್ತದಲ್ಲಿ ಶುಕ್ರವಾರ ಸಂಜೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸದರಿ ರಸ್ತೆಯು 7 ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸುತ್ತದೆ. ಕಳೆದ 30 ವರ್ಷಗಳಿಂದಲೂ ನೆಲಮಂಗಲ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕರಿಲ್ಲದೆ ಕಾರ್ಯಕರ್ತರ ಯಾವುದೇ ಬೇಡಿಕೆ ಈಡೇರಿಲ್ಲ. 35 ಸಾವಿರ ಮತಗಳಿಂದ ಶಾಸಕರನ್ನು ಗೆಲ್ಲಿಸಿದ ಪರಿಣಾಮ ಈಗ ಲೋಕೋಪಯೋಗಿ, ಆರ್‌ಡಿಪಿಆರ್, ಶಿಕ್ಷಣ ಮತ್ತು ಕೆರೆ ತುಂಬಿಸುವ ಯೋಜನೆಗಳನ್ನು ಶಾಸಕರು ಮುತುವರ್ಜಿಯಿಂದ ತರುತ್ತಿದ್ದಾರೆ. ಶಾಸಕರು ಉತ್ಸಾಹಿಗಳಾಗಿರಬೇಕು ಮತ್ತು ಅವರಿಗೆ ಕೆಲಸದ ಬಗ್ಗೆ ತಿಳುವಳಿಕೆ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಅಂತಹವರಲ್ಲಿ ಶ್ರೀನಿವಾಸ್ ಒಬ್ಬರು ಎಂದು ಜಾರಕಿಹೊಳಿ ಪ್ರಶಂಸಿಸಿದರು.

ಶಾಸಕ ಶ್ರೀನಿವಾಸ್ ಮಾತನಾಡಿ, ಈ ಹಿಂದಿನವರು ಕ್ಷೇತ್ರದಲ್ಲಿ ಕಾಟಾಚಾರಕ್ಕೆ ಮಾಡಿರುವ ರಸ್ತೆಗಳು ಗುಂಡಿಬಿದ್ದಿದ್ದು, ಸಾರ್ವಜನಿಕರು ಸಂಚರಿಸಲು ಕಷ್ಟ ಪಡುತ್ತಿದ್ದಾರೆ. ಕ್ಷೇತ್ರವ್ಯಾಪ್ತಿಯಲ್ಲಿ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಇತ್ತು. ಅಲ್ಲದೇ ನೆಲಮಂಗಲ ಕ್ಷೇತ್ರ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿತ್ತು. ಎಲ್ಲ ಗ್ರಾಮಗಳಲ್ಲೂ ಮೂಲಸೌಕರ್ಯಗಳ ಕೊರತೆ ಇತ್ತು. ಕ್ಷೇತ್ರ ಕಾಂಗ್ರೆಸ್ ವಶವಾದ ಬಳಿಕೆ ಎಲ್ಲವೂ ಬದಲಾಗಿದೆ ಎಂದರು.

₹31.36 ಕೋಟಿ ಅನುದಾನ :ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಶಿವಗಂಗೆ-ಲಕ್ಕೂರು ರಸ್ತೆ ವಿಸ್ತರಣೆಗೆ ಬೆಳಗಾವಿ ಅಧಿವೇಶನದಲ್ಲಿ ಸಚಿವರಲ್ಲಿ ಬೇಡಿಕೆ ಇಟ್ಟಿದ್ದೆ. ಅಧಿವೇಶನದಲ್ಲಿ ರಾತ್ರಿ 10.30 ಆದರೂ ಸಮಯದ ಪರವೆ ಇಲ್ಲದೆ ನನ್ನ ಬೇಡಿಕೆ ಮನ್ನಿಸಿದ್ದ ಸಚಿವರು, ರಸ್ತೆ ವೀಕ್ಷಣೆ ಮಾಡಿ ಅನುಮೋದನೆ ನೀಡುವುದಾಗಿ ಅಂದು ಭರವಸೆ ನೀಡಿದ್ದರು. ಕೇವಲ ಒಂದು ತಿಂಗಳಲ್ಲಿ ಕ್ಷೇತ್ರಕ್ಕೆ ಬಂದು ಬೇಡಿಕೆ ಈಡೇರಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ಪ್ರಾರಂಭವಾಗಿದ್ದ ಬೇಗೂರು-ತ್ಯಾಮಗೊಂಡ್ಲು-ನಿಡವಂದ ರಸ್ತೆ ವಿಸ್ತರಣೆ ಕಾಮಗಾರಿಗೆ ತಡೆ ಹಿಡಿದು, ಮುಖ್ಯಮಂತ್ರಿಗಳಿಗೆ ಮನವಿ ಮಾಡಿ, ₹ 16 ಕೋಟಿಯಿಂದ ₹31.36 ಕೋಟಿಗೆ ಅನುದಾನ ಹೆಚ್ಚಿಸಿ ನಾಲ್ಕು ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಹಕರಿಸಿದ ಲೋಕೋಪಯೋಗಿ ಸಚಿವರನ್ನೇ ಭೂಮಿ ಪೂಜೆಗೆ ಕರೆಸಬೇಕೆಂದು ತೀರ್ಮಾನಿಸಲಾಗಿತ್ತು ಎಂದರು.

ಸಚಿವ ಸತೀಶ್ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಸದಸ್ಯ ರವಿ ಅವರಿಗೆ ನೆಲಮಂಗಲ ಯೋಜನಾ ಪ್ರಾಧಿಕಾರದ ಸದಸ್ಯ ಪ್ರಕಾಶ್ ಬಾಬು ಅವರು ಬೆಳ್ಳಿಗದೆ ನೀಡಿ, ಸನ್ಮಾನಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣಗೌಡ, ಸದಸ್ಯ ಪ್ರಕಾಶ್‌ಬಾಬು, ನೆಲಮಂಗಲ ಬ್ಲಾಕ್ ಅಧ್ಯಕ್ಷ ವಜ್ರಗಟ್ಟೆ ನಾಗರಾಜ್, ಬಗರ್‌ಹುಕುಂ ಸಮಿತಿ ಸದಸ್ಯ ಹನುಮಂತೇಗೌಡ, ಬ್ಲಾಕ್ ಅಧ್ಯಕ್ಷ ಜಗದೀಶ್, ತ್ಯಾಮಗೊಂಡ್ಲು ಗ್ರಾಪಂ ಅಧ್ಯಕ್ಷ ಟಿ.ಎಚ್.ಮಲ್ಲೇಶ್, ಅರೆಬೊಮ್ಮನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶೈಲೇಂದ್ರ, ಕೊಡಿಗೆಹಳ್ಳಿ ಗ್ರಾಪಂ ಅಧ್ಯಕ್ಷ ಅಪ್ಪಾಜಿ, ಬಿ.ಟಿ.ರಾಮಚಂದ್ರ, ಹಸಿರುವಳ್ಳಿ ಕುಮಾರಣ್ಣ, ಮಿಲ್ಟ್ರಿ ಮೂರ್ತಿ, ಸೋಮಶೇಖರ್, ಟಿ.ಎನ್.ಪ್ರದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net