

ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕು. ಸದನದಲ್ಲಿ ಶಾಸಕರು ಶಿರಸಿ ಜಿಲ್ಲೆಗೆ ಆಗ್ರಹಿಸಿ ಧ್ವನಿ ಎತ್ತಬೇಕಿದ್ದು, ಈ ನಿಟ್ಟಿನಲ್ಲಿ ಯತ್ನಿಸಲಾಗುವುದು ಎಂದು ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆ ವಿಸ್ತೀರ್ಣದಲ್ಲಿ ಹೆಚ್ಚಿರುವುದು ಮತ್ತು ಜಿಲ್ಲಾ ಕೇಂದ್ರ ಒಂದು ಮೂಲೆಯಲ್ಲಿರುವುದು ಸಮಸ್ಯೆ ಆಗಿದೆ. ಇದರಿಂದಾಗಿ ಅಧಿಕಾರಿಗಳಿಗೆ ಕಾರವಾರಕ್ಕೆ ಮೀಟಿಂಗ್ಗೆ ಹೋಗಿ ಬರುವುದರಲ್ಲೇ ಸಮಯ ಹಿಡಿಯುತ್ತಿದೆ. ಪ್ರತಿ ದಿನ ಒಂದಿಲ್ಲೊಂದು ಅಧಿಕಾರಿಗಳು ಕಾರವಾರಕ್ಕೆ ತೆರಳಿದ್ದಾರೆ ಎಂಬ ಮಾತುಗಳು ಪ್ರತಿ ಕಚೇರಿಯಲ್ಲೂ ಕೇಳಿಬರುವಂತಾಗಿದೆ. ಪ್ರತಿ ತಿಂಗಳಿಗೆ ಕಾರವಾರಕ್ಕೆ ತೆರಳುವ ಅಧಿಕಾರಿಗಳ ಡೀಸೆಲ್ ಖರ್ಚು ಲಕ್ಷಾಂತರ ರೂ. ದಾಟುತ್ತಿದೆ. ಶಿರಸಿಯ ಜೈಲನ್ನೂ ಕಾರವಾರಕ್ಕೆ ವರ್ಗಾಯಿಸಿದ್ದರಿಂದ ಕೈದಿಗಳನ್ನು ನ್ಯಾಯಾಲಯಕ್ಕೆ ಕರೆತರಲು ಪೊಲೀಸ್ ಇಲಾಖೆ ಲಕ್ಷಾಂತರ ರೂ. ಖರ್ಚು ಮಾಡಬೇಕಾದ ಸ್ಥಿತಿ ಇದೆ. ಈ ಮೊದಲು ಶಿಕ್ಷಣ ವ್ಯವಸ್ಥೆಯಲ್ಲೂ ಅಧಿಕಾರಿಗಳು ಇದೇ ರೀತಿ ಓಡಾಡಬೇಕಿತ್ತು. ಈಗ ಶಿರಸಿ ಪ್ರತ್ಯೇಕ ಶೈಕ್ಷಣಿಕ ಜಿಲ್ಲೆ ಆಗಿದ್ದರಿಂದ ಈ ಓಡಾಟ ಸ್ಥಗಿತಗೊಂಡಿದೆ. ಇದೇ ರೀತಿ ಜಿಲ್ಲೆಯೂ ಆಡಳಿತಾತ್ಮಕವಾಗಿ ಪ್ರತ್ಯೇಕಗೊಳ್ಳಬೇಕು ಎಂದರು.
ರಾಜಕೀಯಕ್ಕೆ ನಾವು ಈ ಹೋರಾಟ ನಡೆಸಿದ್ದೇವೆ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಹೇಳಿದ್ದಾರೆ. ಅವರಿಗೆ ಶಿರಸಿಯವರು ಅನುಭವಿಸುತ್ತಿರುವ ಸಮಸ್ಯೆ ತಿಳಿಸಿಕೊಡುವ ಅಗತ್ಯತೆ ಇದೆ ಎಂದರು.
ಎಂ.ಎಂ. ಭಟ್, ವೀಣಾ ಶೆಟ್ಟಿ, ರಘು ಕಾನಡೆ, ಅರ್ಚನಾ ನಾಯಕ ಇತರರಿದ್ದರು.