

ಪಡುಬಿದ್ರಿ: ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕಾಪು ಲೈಟ್‌ಹೌಸ್‌ನ 120ನೇ ವರ್ಷಾಚರಣೆ ಸಂಭ್ರಮಕ್ಕೆ ಕೊಡುಗೆಯಾಗಿ ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಂಚೆ ಇಲಾಖೆ ಕಾಪು ದೀಪಸ್ತಂಭದ ನವೀಕೃತ ಶಾಶ್ವತ ಚಿತ್ರ ಅಂಚೆ ಮೊಹರು (ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್) ಬಿಡುಗಡೆಗೊಳಿಸಿದೆ.
ಕಾಪು ಸಮುದ್ರ ತೀರದ ಬಂಡೆಯ ಮೇಲಿನಲ್ಲಿ 34 ಮೀಟರ್ ಎತ್ತರದ ದೀಪಸ್ತಂಭವನ್ನು ಈಸ್ಟ್ ಇಂಡಿಯಾ ಕಂಪನಿಯು 1901ರಲ್ಲಿ ನಿರ್ಮಿಸಿತ್ತು. ಉಪಗ್ರಹ ಆಧರಿತ ದಿಕ್ಸೂಚಿ ಇಲ್ಲದಿದ್ದಾಗ ಹಡಗುಗಳಿಗೆ, ನಾವಿಕರಿಗೆ ಮಾರ್ಗದರ್ಶನ ನೀಡಲು ಇದು ಬಳಕೆಯಾಗುತ್ತಿತ್ತು. ಕಾಪು ಲೈಟ್ ಹೌಸ್ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದ್ದು, ಕಡಲ ತೀರಕ್ಕೆ ವಿಶೇಷ ಮೆರುಗು ನೀಡಿದೆ. ಆ ಮೂಲಕ ದೇಶ ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕಾಪು ದೀಪಸ್ತಂಭದ ನವೀಕೃತ ಶಾಶ್ವತ ಚಿತ್ರ ಅಂಚೆ ಮೊಹರು ಆ.21ರಿಂದ ಕಾಪು ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಅಂಚೆ ಪರಿಕರಗಳಿಗೆ ಯಾವುದೇ ಶುಲ್ಕವಿಲ್ಲದೆ ಆಸಕ್ತರು ಫಿಲಾಟಲಿ ಮೌಲ್ಯದ ಈ ಶಾಶ್ವತ ಅಂಚೆ ಮೊಹರಿನ ಮುದ್ರೆಯನ್ನು ಪಡೆದುಕೊಳ್ಳಬಹುದು.