

ವಿಜಯವಾಣಿ ಸುದ್ದಿಜಾಲ ಬೈಂದೂರು
ಅವಿಭಜಿತ ದ.ಕ. ಜಿಲ್ಲೆಯ 170 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಲಾಭದೊಂದಿಗೆ ಮುನ್ನೆಡೆಯುತ್ತಿವೆ. ಕೃಷಿಸಾಲ ಮರುಪಾವತಿಯಲ್ಲಿಯೂ ಇಲ್ಲಿನ ಸಹಕಾರಿ ಸಂಘಗಳು ಶೇ.100 ಮರುಪಾವತಿಯೊಂದಿಗೆ ರಾಷ್ಟ್ರದಲ್ಲಿಯೇ ಗುರುತಿಸಲ್ಪಟ್ಟಿವೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಬೈಂದೂರು ತಾಲೂಕು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ನವೀಕೃತ ಪ್ರಧಾನ ಕಚೇರಿ ಮತ್ತು ಮೇಲಂತಸ್ತಿನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಇವತ್ತು ಸಹಕಾರಿ ಕ್ಷೇತ್ರದಲ್ಲಿ ನಾವು ಬೆಳೆದು ಇತರರನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ಹಲವು ಏಳುಬೀಳುಗಳನ್ನು ಕಂಡು ಇಂದು ಅಭಿವೃದ್ಧಿಯ ಪಥದಲ್ಲಿ ಮುನ್ನೆಡೆಯುತ್ತಿದೆ. ನಮ್ಮ ರಾಜ್ಯದ ಸಹಕಾರ ವ್ಯವಸ್ಥೆಯಲ್ಲಿ ನಮ್ಮ ಜಿಲ್ಲೆಯ ಸಹಕಾರಿಗಳಿಗೆ ವಿಶೇಷ ಸ್ಥಾನವಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವತಿಯಿಂದ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ರೂ. 10 ಲಕ್ಷ ನೀಡುವುದಾಗಿ ಘೋಷಿಸಿದರು.
ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಂ.ಮಹೇಶ್ ಹೆಗ್ಡೆ, ಜಯರಾಜ್ ರೈ, ಮೊನಪ್ಪ ಶೆಟ್ಟಿ, ಹರಿಶ್ಚಂದ್ರ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್., ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ.., ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ, ನಾವುಂದ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಎಸ್.ರಾಜು ಪೂಜಾರಿ ಸ್ವಾಗತಿಸಿದರು. ನಿರ್ದೇಶಕ ನರಸಿಂಹ ದೇವಾಡಿಗ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾಯಕಿ ಗೀತಾ ಬೈಂದೂರು ಬಳಗದಿಂದ ಸಂಗೀತ ರಸಮಂಜರಿ, ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಿ.ಕಾಳಿಂಗ ನಾವುಡ ವಿರಚಿತ ಯಕ್ಷಗಾನ ಪ್ರಸಂಗ ನಾಗಶ್ರೀ ಪ್ರದರ್ಶನಗೊಂಡಿತು.
ಶಾಲೆಗಳಷ್ಟೇ ಸಹಕಾರ ಸಂಘಗಳಿಗೂ ಮಹತ್ವವಿದೆ. ಒಂದು ಗ್ರಾಮದಲ್ಲಿ ಜ್ಞಾನ ನೀಡುವ ಶಾಲೆ ಎಷ್ಟು ಮುಖ್ಯವೋ ಹಾಗೆಯೇ ಪ್ರತಿಯೊಂದು ಗ್ರಾಮದಲ್ಲಿ ವಿಶ್ವಾಸಾರ್ಹ ಹಣಕಾಸು ಸಂಸ್ಥೆಯಾಗಿರುವ ಸಹಕಾರ ಸಂಘಗಳು ಮುಖ್ಯ. ಸಹಕಾರ ವ್ಯವಸ್ಥೆ ಜನರ ವಿಶ್ವಾಸ ಪಡೆದುಕೊಂಡು ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ದ.ಕಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ರಾಜೇಂದ್ರ ಕುಮಾರ್ ಛಾಪು ಮೂಡಿಸಿದ್ದಾರೆ.
ಗುರುರಾಜ್ ಶೆಟ್ಟಿ ಗಂಟಿಹೊಳೆ ಶಾಸಕ
ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಸಹಕಾರಿ ಸಂವರ್ಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಭಾಗವತ ಹೇರಂಜಾಲು ಗೋಪಾಲ ಗಾಣಿಗ ಬಳಗದವರಿಂದ ರಾಜೇಂದ್ರಕುಮಾರ್ ಅವರ ಪರಿಚಯವನ್ನು ಯಕ್ಷಗಾನ ಪದ್ಯ, ನೃತ್ಯದ ಮೂಲಕ ಪ್ರಸ್ತುತ ಪಡಿಸಿದರು. ಸಂಘದ ವ್ಯಾಪ್ತಿಯಲ್ಲಿ 25 ವರ್ಷಗಳನ್ನು ಪೂರೈಸಿರುವ ಸ್ವಾತಿ ನವೋದಯ ಸ್ವಸಹಾಯ ಗುಂಪನ್ನು ಅಭಿನಂದಿಸಲಾಯಿತು. ಚೈತನ್ಯ ವಿಮಾ ಯೋಜನೆಯ ಪರಿಹಾರ ಮೊತ್ತವನ್ನು ವಿತರಿಸಲಾಯಿತು.