

ಕಡೂರು: ಪಾರಂಪರಿಕವಾಗಿ ಕಲ್ಲು ಒಡೆಯುವ ಕಾರ್ಮಿಕರಿಗೇ ಕಲ್ಲು ಒಡೆಯಲು ಅರ್ಜಿ ನವೀಕರಿಸಿ ಅನುಮತಿ ಕೊಡಬೇಕು. ದೊಡ್ಡ ಕ್ರಷರ್ ಮಾಲೀಕರಿಗೆ ನಿರಾಕ್ಷೇಪಣಾ ಪತ್ರ ನೀಡಬಾರದು ಎಂದು ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ನಿರ್ದೇಶನ ನೀಡಿದರು.
ತಾಪಂನಲ್ಲಿ ಬುಧವಾರ ಆಯೋಜಿಸಿದ್ದ ಪಾರಂಪರಿಕ ಕಲ್ಲು ಕೆಲಸ ಮಾಡುವವರ ಸಮಸ್ಯೆ ಕುರಿತ ಸಭೆಯಲ್ಲಿ ಮಾತನಾಡಿ, ಪಾರಂಪರಿಕವಾಗಿ ಕಲ್ಲು ಒಡೆಯುವವರ ನವೀಕರಣದ ಅರ್ಜಿಯನ್ನು ಮರು ಪರಿಶೀಲನೆ ಮಾಡಿ ಅವರನ್ನೇ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ ಎಂದರು.
ಬಹಳಷ್ಟು ಜನರು ತಾಲೂಕಿನಲ್ಲಿ ರಾಯಧನ ಪಾವತಿಸಿ ಕಲ್ಲುಭೂಮಿ ಗುತ್ತಿಗೆ ಪಡೆದು ಕಲ್ಲು ಒಡೆದು ಜೀವನ ಮಾಡುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಬೇಕು. ಈಗಿನ ಜಾಗದಲ್ಲೇ ಅವರು ಕಾಯಕ ಮುಂದುವರಿಸಲು ಯಾವ ತೊಂದರೆಯೂ ಇಲ್ಲ. ಆದರೆ ಅವರಿಗೆ ನೀಡಿರುವ ಅನುಮತಿ ನವೀಕರಿಸಲು ಕೆಲವು ತೊಂದರೆಗಳು ಎದುರಾಗಿವೆ. ಕೆಲ ಜಾಗಗಳು ಅರಣ್ಯ ಎಂದು ಅಥವಾ ಇನ್ಯಾವುದೋ ಇಲಾಖೆಗೆ ಸೇರಿ ಗೊಂದಲವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗುವುದು. ಜಾಗಗಳು ಉಳ್ಳವರ ಪಾಲಾಗದೆ ಶ್ರಮಿಕರಿಗೆ ಜೀವನಾಧಾರವಾಗಬೇಕು ಎಂದು ಹೇಳಿದರು.
ಕಲ್ಲು ಕೆಲಸಗಾರರನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು. ಸಮಸ್ಯೆಗೆ ಪರಿಹಾರ ದೊರೆಯುವ ತನಕ ನವೀಕರಣಕ್ಕಾಗಿ ದೊಡ್ಡ ಕ್ರಷರ್‌ಗಳಿಂದ ಬಂದಿರುವ ಅರ್ಜಿಗಳಿಗೆ ಹೊಸದಾಗಿ ನಿರಾಕ್ಷೇಪಣಾ ಪತ್ರ ನೀಡಬಾರದು. ಇಂದಿನ ಸಭಾ ನಡಾವಳಿಗಳನ್ನು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಗೆ ನೀಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ವಿಂದ್ಯಾಅವರಿಗೆ ಸೂಚಿಸಿದರು.
ತಹಸೀಲ್ದಾರ್ ಎಂ.ಪಿ.ಕವಿರಾಜ್, ಕಲ್ಲು ಕೆಲಸಗಾರರ ಮತ್ತು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಆರ್.ಶಿವಕುಮಾರ್, ಕಾರ್ಯದರ್ಶಿ ಗೋಪಿ, ಷಣ್ಮುಖ ಭೋವಿ, ಸುಬ್ರಹ್ಮಣ್ಯ ಇದ್ದರು.