ನೂರಾರು ಎಕರೆ ಕೃಷಿಭೂಮಿ ಜಲಾವೃತ, ಯುಪಿಸಿಎಲ್ ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿ ಅವಾಂತರ

flood new
Published on

ಹೇಮನಾಥ ಪಡುಬಿದ್ರಿ

ಯುಪಿಸಿಎಲ್ ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿಯಿಂದ ಎರ್ಮಾಳು ಮೂಡುಬೆಟ್ಟು, ಎರ್ಮಾಳು ಬೀಡು ಪ್ರದೇಶದ ನೂರಾರು ಎಕರೆ ಕೃಷಿಭೂಮಿ ಜಲಾವೃತವಾಗಿ ಇಲ್ಲಿನ ರೈತರು ಪ್ರತಿವರ್ಷ ಸಂಕಷ್ಟ ಪಡುವಂತಾಗಿದೆ.

ಮೂಡುಬೆಟ್ಟು ಪ್ರದೇಶದ ಹಲವಾರು ರೈತರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಾಟಿ ಮಾಡಿದ ಭತ್ತದ ಗದ್ದೆಗಳು ಮುಳುಗಡೆಯಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅವೈಜ್ಞಾನಿಕ ಕಾಮಗಾರಿ ಬಗ್ಗೆ ಹಲವು ಬಾರಿ ಯುಪಿಸಿಎಲ್‌ಗೆ ಮನವಿ ಮಾಡಿದರೂ ಅದನ್ನು ಸರಿಪಡಿಸಲು ಮುಂದಾಗದೆ ಕೃಷಿಕರು ಬೇಸಾಯದಿಂದ ಹಿಂದೆ ಸರಿಯುವ ಪ್ರಸಂಗ ಎದುರಾಗುತ್ತಿದೆ. ಈ ಪ್ರದೇಶದ ತೋಡಿನ ಹೂಳೆತ್ತುವ ಬಗ್ಗೆ ಗ್ರಾಪಂ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ನಾಟಿ ಮಾಡಿದ ಭತ್ತದ ಸಸಿಗಳು ನೆರೆಯಿಂದ ಕೊಳೆತು ಹೋಗಿವೆ. ಪರಿಸರದಲ್ಲಿ ಕಾಮಿನಿ ನದಿ ಸೇರುವ ಮಳೆ ನೀರು ಹರಿಯುವ ತೋಡು ಇದ್ದು, ಯುಪಿಸಿಎಲ್ ಅವೈಜ್ಞಾನಿಕ ಕಾಮಗಾರಿಯಿಂದ ತೋಡಿನಲ್ಲಿ ಹರಿಯಬೇಕಾದ ಮಳೆ ನೀರು ಪ್ರತಿ ಮಳೆಗಾಲದಲ್ಲೂ ಕೃಷಿಭೂಮಿಗೆ ನುಗ್ಗುತ್ತಿದೆ. ಈ ತೋಡಿನ ಇಕ್ಕೆಲಗಳಲ್ಲಿ ನೂರಾರು ಎಕರೆ ಕೃಷಿಭೂಮಿ ಇದ್ದು, ಸಮಸ್ಯೆಗೆ ತತ್ತರಿಸಿ ಇತ್ತೀಚಿನ ದಿನಗಳಲ್ಲಿ ಬೆರಳೆಣಿಕೆ ಮಂದಿ ಮಾತ್ರ ಕೃಷಿ ಮಾಡುತ್ತಿದ್ದು, ಉಳಿದವು ಹಡಿಲುಬಿಡುವಂತಾಗಿದೆ. ಸಂಬಂಧಿಸಿದ ಇಲಾಖೆ ತೋಡಿನ ಹೂಳೆತ್ತುವ ಹಾಗೂ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಯುಪಿಸಿಎಲ್ ಕಂಪನಿಗೆ ಸೂಕ್ತ ನಿರ್ದೇಶನ ನೀಡಿ ಸಮಸ್ಯೆ ಪರಿಹರಿಸುವಂತೆ ರೈತರು ಒತ್ತಾಯಿಸಿದ್ದಾರೆ.

ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚ ಮಾಡಿ 10 ದಿನಗಳ ಹಿಂದೆ ನಾಟಿ ಮಾಡಿದ್ದೇವೆ. ನೆರೆಯಿಂದ ಹಲವಾರು ಎಕರೆ ಪ್ರದೇಶದ ಭತ್ತದ ಬೆಳೆ ಸಂಪೂರ್ಣ ನೀರುಪಾಲಾಗಿದೆ. ಯುಪಿಸಿಎಲ್ ಪೈಪ್‌ಲೈನ್ ಕಾಮಗಾರಿ ಹಾಗೂ ಈ ಭಾಗದ ತೋಡಿನ ಹೂಳೆತ್ತದೆ ಇಲ್ಲಿನ ಕೃಷಿಕರು ಸಂಕಷ್ಟಪಡುತ್ತಿದ್ದೇವೆ. ನಮ್ಮ ಗೋಳಿಗೆ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಜಿಲ್ಲಾಡಳಿತ ಹಡಿಲು ಭೂಮಿ ಕೃಷಿಗೆ ಉತ್ತೇಜನ ನೀಡಿದೆಯಾದರೂ ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ಅನಿವಾರ್ಯತೆಯಿದೆ. ಬಯಲು ಕೃಷಿ ಭೂಮಿಯನ್ನು ಬೇಸಾಯ ಹೊರತು ಅನ್ಯ ಉದ್ದೇಶಕ್ಕೆ ಬಳಕೆ ಮಾಡದಂತೆಯೂ ಕಟ್ಟುನಿಟ್ಟಾಗಿ ಕ್ರಮವಹಿಸಬೇಕು.

ಸಂತೋಷ್ ಜೆ. ಶೆಟ್ಟಿ, ಮೂಡುಬೆಟ್ಟು ಬರ್ಪಾಣಿ

ಯುಪಿಸಿಎಲ್ ಕಾಮಗಾರಿಯಿಂದ ತೊಂದರೆಯಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೂಡುಬೆಟ್ಟು ಭಾಗದ ತೋಡಿನ ಹೂಳೆತ್ತಬೇಕಾಗಿದ್ದು, ಸಮಸ್ಯೆ ಬಗ್ಗೆ ಗ್ರಾಪಂ ಅಧ್ಯಕ್ಷರೊಡನೆ ಚರ್ಚಿಸಿ ಸ್ಥಳ ಪರಿಶೀಲನೆ ನಡೆಸಲಾಗುವುದು.

ಕುಶಾಲಿನಿ, ಬಡಾ ಗ್ರಾಪಂ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net