ಮಿಮ್ಸ್‌ಗೆ ಉಪಲೋಕಾಯುಕ್ತರ ಭೇಟಿ: ರೋಗಿಗಳ ಆರೋಗ್ಯ ವಿಚಾರಿಸಿದ ಬಿ.ವೀರಪ್ಪ

Upalokayukta visits MIMS Mandya
Published on

ಮಂಡ್ಯ: ಉಪಲೋಕಾಯುಕ್ತ ಬಿ.ವೀರಪ್ಪ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಭೇಟಿ ನೀಡಿದರು.

ಕೀಲು ಮತ್ತು ಮೂಳೆ ಒಳ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು, ಪುರುಷರು ಹಾಗೂ ಮಕ್ಕಳ ವಾರ್ಡ್‌ಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಅಂತೆಯೇ ಮಿಮ್ಸ್‌ನಲ್ಲಿ ನೀಡಲಾಗುತ್ತಿರುವ ಸೇವೆ, ಔಷಧೋಪಚಾರ, ಕುಡಿಯುವ ನೀರು, ಶೌಚಗೃಹದ ಸ್ವಚ್ಛತೆ, ಹೊರ ರೋಗಿಗಳಿಗೆ ಇರುವ ತೊಂದರೆಗಳು ಕುರಿತಂತೆ ಮಾಹಿತಿ ಪಡೆದುಕೊಂಡರು.

ನಂತರ ಔಷಧ ವಿತರಣಾ ಕೇಂದ್ರ, ಪಾರ್ಕಿಂಗ್, ಆಂಬ್ಯುಲೆನ್ಸ್ ಸೇವೆ ಕುರಿತು ಪರಿಶೀಲಿಸಿದರು. ಪಾರ್ಕಿಂಗ್‌ಗಾಗಿ ಹೆಚ್ಚು ಹಣ ಪಡೆಯುತ್ತಿರುವ ಹಾಗೂ ಔಷಧವನ್ನು ಖರೀದಿಸಲು ಹೊರಗಡೆ ಮೆಡಿಕಲ್ ಸ್ಟೋರ್‌ಗಳಿಗೆ ಬರೆದು ಕೊಡುತ್ತಿದ್ದಾರಾ ಎಂದು ರೋಗಿಗಳ ಬಳಿ ಪ್ರಶ್ನಿಸಿದರು.

ಆಸ್ಪತ್ರೆಯಲ್ಲಿರುವ ಕ್ಯಾಂಟೀನ್‌ನಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಕುರಿತು ಪರಿಶೀಲಿಸಿದ ಬಿ.ವೀರಪ್ಪ, ಪ್ರತಿ ಆಹಾರ ಪದಾರ್ಥ ಮಾರಾಟ ಕುರಿತು ಬೆಲೆಯ ವಿವರ ಅನಾವರಣ ಮಾಡಬೇಕು ಎಂದು ಸೂಚಿಸಿದರು. ಸ್ಥಳದಲ್ಲೇ ಆಹಾರ ಸುರಕ್ಷಾ ಅಧಿಕಾರಿಗಳಿಗೆ ಕರೆ ಮಾಡಿ ಕ್ಯಾಂಟೀನ್‌ನಲ್ಲಿ ಮಾರಾಟ ಮಾಡುತ್ತಿರುವ ವಸ್ತುಗಳ ಬಗ್ಗೆ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net