ವಕೀಲಿಕೆ ಜ್ಞಾನ ಸಮಾಜಕ್ಕೋಸ್ಕರವಿರಲಿ: ನ್ಯಾ. ಫಣೀಂದ್ರ

udp-5-upalokayukta
Published on

ಉಡುಪಿ: ಕಾನೂನು ರಚನೆ ಸಂದರ್ಭದಲ್ಲಿ ವಕೀಲರು ಮಹತ್ವ ಪಾತ್ರ ವಹಿಸುತ್ತಿದ್ದು, ಕಾನೂನುಗಳನ್ನು ವಿಶ್ಲೇಷಿಸುವ ಜವಾಬ್ದಾರಿ ಹೊಂದಿದ್ದಾರೆ. ಜೊತೆ ಇದರಿಂದ ಸಮಾಜದಲ್ಲಿ ಆಗುವ ಪರಿಣಾಮಗಳನ್ನು ಶಾಸಕಾಂಗ ಮತ್ತು ನ್ಯಾಯಾಂಗಕ್ಕೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಹೀಗಾಗಿ ವಕೀಲರು ತಮ್ಮಲ್ಲಿರುವ ಜ್ಞಾನವನ್ನು ಸಮಾಜಕ್ಕೋಸ್ಕರ ಉಪಯೋಗಿಸಿಕೊಳ್ಳಬೇಕು. ಜೀವನದಲ್ಲಿ ಉದಾತ್ತ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಉಪಯೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್​. ಫಣೀಂದ್ರ ಹೇಳಿದರು.

ಸೋಮವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರ ಸಂಘದ ವತಿಯಿಂದ ನಡೆದ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರದ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ವಕೀಲ ವೃತ್ತಿ ಎಲ್ಲಾ ಉದ್ಯೋಗಕ್ಕಿಂತ ವಿಭಿನ್ನವಾಗಿದ್ದು, ಸ್ವಾತಂತ್ರ$್ಯಹೋರಾಟದಲ್ಲೂ ಮಹತ್ವದ ಪಾತ್ರ ವಹಿಸಿದೆ. ವಕೀಲರು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಸಮಾಜಕ್ಕೂ ಅತೀ ಅವಶ್ಯಕವಾಗಿ ಬೇಕಾದ ಸಮುದಾಯವಾಗಿದೆ. ಜನಸಾಮನ್ಯರು, ಅಧಿಕಾರಿಗಳು, ರಾಜಕಾರಣಿಗಳು ಯಾವುದೇ ಸಮಸ್ಯೆ ಬಂದಾಗ ವಕೀಲರನ್ನು ಮೊದಲು ಸಂಪರ್ಕಿಸುತ್ತಾರೆ. ಸಲಹೆ ಕೇಳುತ್ತಾರೆ ಎಂದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಲೋಕಾಯುಕ್ತ ಕಚೇರಿ ಹಿರಿಯ ಅಧಿಕಾರಿಗಳಾದ ಚೆನ್ನಕೇಶವ ರೆಡ್ಡಿ, ರಂಗೇ ಗೌಡ, ಕಿರಣ್​ ಕುಮಾರ್​, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್​., ವಕೀಲರ ಸಂದ ಪ್ರಧಾನ ಕಾರ್ಯದರ್ಶಿ ರಾಜೇಶ್​ ಎಂ.ಆರ್​. ಉಪಸ್ಥಿತರಿದ್ದರು. ವಕೀಲರ ಸಂದ ಅಧ್ಯಕ್ಷ ರೊನಾಲ್ಡ್​ ಪ್ರವಿಣ್​ ಕುಮಾರ್​ ಸ್ವಾಗತಿಸಿ, ವಕೀಲೆ ಸಹನಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net