ನಾನು ಎಂಎಲ್​ಎ ಅಲ್ಲ, ಲೋಕಾಯುಕ್ತ

Upa_loka
Published on

ತುಮಕೂರು: ನಾನು ಎಂಎಲ್​ಎ ಅಲ್ಲ. ಲೋಕಾಯುಕ್ತ. ಕೇಸಿಗೆ ಸಂಬಂಧಪಟ್ಟಿದ್ದು ಮಾತ್ರ ಹೇಳು. ಪ್ರಪಂದ ಎಲ್ಲಾ ವಿಚಾರ ಮಾತಾಡಬೇಡ, ಆ ಸಮಸ್ಯೆಗಳನ್ನು ನನ್ನಿಂದ ಬಗೆಹರಿಸಲು ಸಾಧ್ಯವಿಲ್ಲ. ಹೀಗೆಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ದೂರುದಾರರೊಬ್ಬರನ್ನು ಎಚ್ಚರಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಲೋಕಾಯುಕ್ತ ಸಂಸ್ಥೆ ಜಿಲ್ಲೆಯ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ದೊಡ್ಡಗುಣಿಯ ದೂರುದಾರ ಚರಣಕುಮಾರ್​ ತಮಗೆ ಸೇರಿದ 25 ಗುಂಟೆ ಜಮೀನನ್ನು ಕಂದಾಯ ನಿರೀಕ್ಷಕ ನಾರಾಯಣ್​ ಅಕ್ರಮ ಖಾತೆ ಮಾಡಿಕೊಟ್ಟಿದ್ದು ಈ ಬಗ್ಗೆ ಎಂಎಲ್​ಎ, ಡಿಸಿ ಎಲ್ಲರಿಗೂ ದೂರು ಕೊಟ್ಟರು ಏನೂ ಆಗಿಲ್ಲ ಸ್ವಾಮಿ ಎಂದಾಗ ಕುಪಿತಗೊಂಡ ಉಪಲೋಕಾಯುಕ್ತರು, ಪ್ರಪಂಚದ್ದೆಲ್ಲಾ ನನ್ನ ಬಳಿ ಹೇಳಬೇಡ. ನಾನು ಎಂಎಲ್​ಎ ಅಲ್ಲ. ನಿನ್ನ ಕೇಸಿಗೆ ಸಂಬಂಧಪಟ್ಟಿದ್ದು ಮಾತ್ರ ಹೇಳು ಎಂದು ಗದರಿದ ಪ್ರಸಂಗ ನಡೆಯಿತು.

ಜೈಲಿಗೆ ಹೋಗ್ತೀಯಾ: ನಕಲಿ ದಾಖಲೆ ಸೃಷ್ಟಿಸಿ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡದೆ, ಲೆಕ್ಕ ಪರಿಶೋಧನಾ ವರದಿಯಲ್ಲಿ ನ್ಯೂನತೆ ಹಾಗೂ ಆಕ್ಷೇಪಣೆಗಳ ಮೇಲೆ ಕ್ರಮಕೈಗೊಳ್ಳದೇ ಇರುವ ಬಗ್ಗೆ ಸುದೀಂಧ್ರ ಎಂಬುವರು ನೀಡಿದ ದೂರಿನ ವಿಚಾರಣೆ ವೇಳೆ ಸ್ಥಾಯಿಸಮಿತಿ ರ್ನಿಣಯದಂತೆ ತಾವು ಕ್ರಮಕೈಗೊಂಡಿರುವುದಾಗಿ ಹೇಳಿದ ಕುಣಿಗಲ್​ ತಾಲೂಕು ಹುಲಿಯೂರು ದುರ್ಗ ಗ್ರಾಪಂ ಪಿಡಿಒ ವಿನಾಯಕ್​ಗೆ ದಾಖಲೆ ನೀಡುವಂತೆ ಕೇಳಿದಾಗ ತಡಕಾಡಿದಾಗ ಸಿಟ್ಟಾದ ನ್ಯಾ.ವೀರಪ್ಪ, ದಾಖಲೆ ಕೊಡಲಿಕ್ಕೆ ಸಾಯಿತೀಯಾ, ನೋಡು ಜೈಲಿಗೆ ಹೋಗ್ತೀಯಾ ಎಂದು ಏರುಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು.

ಈ ವೇಳೆ ವೇದಿಕೆಯಲ್ಲಿದ್ದ ಎಸ್ಪಿ ಕೆ.ವಿ.ಅಶೋಕ್​, ತುಮಕೂರು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಪಿಡಿಒ ನೆರವಿಗೆ ಬಂದರಾದರೂ ಆತ ಸೂಕ್ತ ದಾಖಲೆಗಳನ್ನು ಕೊಡದೇ ಇದ್ದಾಗ, ಇಂತವರನ್ನು ಪಿಡಿಒಗಳನ್ನಾಗಿ ಯಾಕೆ ನೇಮಕ ಮಾಡಿಕೊಳ್ಳುತ್ತೀರಾ. ಏನು ಕೇಳಿದರೂ ಬಾಯಿಬಿಡಲಿಕ್ಕೆ ಒದ್ದಾಡುತ್ತಾನೆ. ಜೈಲಿಗೆ ಹೋಗಲಿ ಬಿಡಿ. ಆಗ ಬುದ್ದಿಬರುತ್ತೇ ಎಂದರು.

ಕಣ್ಣು, ಕೈ ನೋಡಿಕೊಂಡು ಕೆಲಸ ಮಾಡಿ: ಸರ್ಕಾರಿ ಜಾಗದಲ್ಲಿ ಶೆಡ್​ ಕಟ್ಟಿದ್ದರೂ ಇಷ್ಟು ವರ್ಷ ಸುಮ್ಮನಿದ್ದೀರಾ? ಏನು ಕೇಳಿದರೂ ನನಗೆ ಗೊತ್ತಿಲ್ಲ, ಹೊಸದಾಗಿ ಬಂದಿದ್ದೀನಿ ಅನ್ನುವ ಉತ್ತರ ಕೊಡುತ್ತೀರಾ. ಕಣ್ಣು, ಕೈ ನೋಡಿಕೊಂಡು ಕೆಲಸ ಮಾಡುವಂತೆ ತುರುವೇಕೆರೆ ತಹಸೀಲ್ದಾರ್​ಗೆ ಉಪಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ಈ ಸಂಬಂಧ ದೂರುದಾರ ರವೀಶ್​ ಎಂಬುವರ ತಂದೆ ಸಹ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆಂದು ಶೆಡ್​ ಕಟ್ಟಿದ್ದ ನಾಗರಾಜ್​ ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ಇಬ್ಬರು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದು ಇಬ್ಬರ ಮೇಲೆ ಕ್ರಮವಹಿಸುವಂತೆ ತಹಸೀಲ್ದಾರ್​ಗೆ 1 ತಿಂಗಳು ಗಡುವು ನೀಡಿದರು.

ಹಿರಿಯ ಸಿವಿಲ್​ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ , ಜಿಲ್ಲಾಧಿಕಾರಿ ಶುಭ ಕಲ್ಯಾಣ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಮಹಾ ನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ,  ಎಚ್​.ಅನುಪಮಾ, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net