ನಿರಾಶ್ರಿತರ ಸಮಸ್ಯೆ ಆಲಿಸಿದ ವೀರಪ್ಪ

Published on

ಗುಬ್ಬಿ: ಪಟ್ಟಣದ ಪೊಲೀಸ್​ ಠಾಣೆ ಹಿಂಭಾಗ ವಾಸಿಸುತ್ತಿರುವ ಹಂದಿಜೋಗಿಗಳ ವಸತಿ ಪ್ರದೇಶಕ್ಕೆ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಭಾನುವಾರ ಖುದ್ದು ಭೇಟಿ ನೀಡಿ ಮಳೆ ನೀರಿನಲ್ಲಿಯೇ ವಾಸಿಸುತ್ತಿರುವ ನಿರಾಶ್ರಿತರ ಸಮಸ್ಯೆ ಆಲಿಸಿದರು. ಸರ್ಕಾರದಿಂದ ಗುರುತಿಸಲಾಗಿರುವ ಸಾತೇನಹಳ್ಳಿ ಪ್ರದೇಶಕ್ಕೆ ಸ್ಥಳಾಂತರವಾಗುವಂತೆ ಸಲಹೆ ನೀಡಿದರು.
ಮಳೆ ನೀರಿನಿಂದ ಆವೃತವಾಗಿರುವ ಗುಡಿಸಲಿನಲ್ಲಿ ಮಕ್ಕಳು,
ಮಹಿಳೆಯರು, ವೃದ್ಧರು ಹೇಗೆ ಬದುಕುತ್ತೀರಿ?. ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಇದಕ್ಕಾಗಿ ಸರ್ಕಾರ ಈಗಾಗಲೇ ಗುರುತಿಸಿರುವ
ಜಾಗಕ್ಕೆ ಸ್ಥಳಾಂತರವಾಗಿ ಎಂದು ಮನವಿ ಮಾಡಿದರು.
ಸತತ ಮಳೆಯಿಂದ ಹಂದಿಜೋಗಿಗಳು ವಾಸಿಸುತ್ತಿದ್ದ ಗುಡಿಸಲುಗಳಿಗೆ ನೀರು ನುಗ್ಗಿದ ಪರಿಣಾಮ ಪಟ್ಟಣದ ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ತಾತ್ಕಾಲಿಕ ಗಂಜಿ ಕೇಂದ್ರ ತೆರೆದು ಆಶ್ರಯ ನೀಡಲಾಗಿದೆ. ಕೆರೆ ಅಂಗಳದಲ್ಲಿಯೇ ಗುಡಿಸಲುಗಳು ಇರುವುದರಿಂದ ಮಳೆ ಬಂದಾಗಲೆಲ್ಲ ಹಂದಿಜೋಗಿಗಳು ಇಂಥ ಪರಿಸ್ಥಿತಿ ಎದುರಿಸುವ ಅನಿವಾರ್ಯತೆ ಉಂಟಾಗಿದೆ ಎಂದು ನ್ಯಾಯಾಧೀಶರ ಮುಂದೆ ನಿರಾಶ್ರಿತರು ಅಳಲು ತೋಡಿಕೊಂಡರು.
ಹಂದಿಜೋಗಿ ಕುಟುಂಬಗಳಿಗೆ ತಾಲೂಕು ಆಡಳಿತದಿಂದ ಸಾತೇನಹಳ್ಳಿಯಲ್ಲಿ ನಿವೇಶನ ಗುರುತಿಸಿ ಈಗಾಗಲೇ ಅರ್ಹ 35 ಕುಟುಂಬಗಳಿಗೆ ಹಕ್ಕುಪತ್ರ ಸಹ ನೀಡಲಾಗಿದ್ದು, ಉಳಿದ ಫಲಾನುಭವಿಗಳು ಅಗತ್ಯ ದಾಖಲಾತಿ ಸಲ್ಲಿಸಿದಲ್ಲಿ ಹಕ್ಕುಪತ್ರ ನೀಡಲು ಕ್ರಮ
ಕೈಗೊಳ್ಳಲಾಗುವುದು ಎಂದು ಸ್ಥಳದಲ್ಲಿಯೇ ಇದ್ದ ತಹಸೀಲ್ದಾರ್​
ಬಿ.ಆರತಿ ಉಪಲೋಕಾಯುಕ್ತರ ಗಮನಕ್ಕೆ ತಂದರು.
ಕೂಡಲೇ ನಿವೇಶಷ ಗುರುತಿಸಿರುವ ಸಾತೇನಹಳ್ಳಿಗೂ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಉಪಲೋಕಾಯುಕ್ತರು ತಾಲೂಕು ಆಡಳಿತದಿಂದ ಈ ಪ್ರದೇಶಕ್ಕೆ ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಸೂಚನೆ ನೀಡಿದರು. ಸಾಕಷ್ಟು ದೂರು ಕೇಳಿಬಂದಿರುವ ಗುಬ್ಬಿ ತಾಲೂಕು ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಮಹಿಳಾ ಒಳರೋಗಿ ವಿಭಾಗ, ಶಸ್ತ್ರಚಿಕಿತ್ಸೆ ನಂತರ ಬಾಣಂತಿಯರ ಕೊಠಡಿ, ಔಷಧ ವಿತರಣಾ ಕೊಠಡಿ, ಸ್ಕಾನಿಂಗ್​ ವಿಭಾಗಗಳನ್ನು ಪರಿಶೀಲನೆ ಮಾಡಿದರಲ್ಲದೆ
ಆಸ್ಪತ್ರೆಯಲ್ಲಿರುವ ರೋಗಿಗಳ ಆರೋಗ್ಯದ ಬಗ್ಗೆ ವಿಚಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net