ನಗರದ ವಿವಿಧೆಡೆ ನಡೆದ ಉಪಾಕರ್ಮ ವಿಧಿ; ನೂತನ ಯಜ್ಞೋಪವೀತ ಧರಿಸಿ ಪ್ರಾರ್ಥನೆ

upa
Published on

ಬೆಂಗಳೂರು : ನಗರದ ವಿವಿಧೆಡೆ ಇರುವ ವಿವಿಧ ಸಂಪ್ರದಾಯದ ಮಠಗಳಲ್ಲಿ ಸಾಮೂಹಿಕವಾಗಿ ಉಪಕರ್ಮ ವಿಧಿಯನ್ನು ಆಚರಿಸಲಾಯಿತು. ಇದೇ ವೇಳೆ ವೈಯಕ್ತಿಕವಾಗಿಯೂ ತಮ್ಮ ತಮ್ಮ ಮನೆಗಳಲ್ಲಿ ಉಪಾಕರ್ಮ ವಿಧಿಯ ಹಿನ್ನೆಲೆಯಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆದವು.

ಶ್ರಾವಣ ಮಾಸದ ಪೌರ್ಣಿಮೆಯನ್ನು ನೂಲು ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಯಜ್ಞೋಪವೀತವನ್ನು ಧರಿಸಿ ಗಾಯತ್ರಿ ದೇವಿಯ ಉಪಾಸನೆ ಮಾಡುವ ಸಾಧಕರು ಈ ದಿನದಂದು ತಮ್ಮ ಜನಿವಾರವನ್ನು ಬದಲಾಯಿಸುವುದು ಪದ್ಧತಿ. ಅಂತೆಯೇ ಶಂಕರಪುರದಲ್ಲಿರುವ ಶೃಂಗೇರಿ ಶಾರದಾ ಮಠದಲ್ಲಿ ಬೆಳಗ್ಗೆಯೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸಾಮೂಹಿಕವಾಗಿ ಗಾಯಿತ್ರಿದೇವಿಯ ಉಪಾಸನೆ ಮತ್ತು ವಿಶೇಷ ಪೂಜೆಯನ್ನು ನೆರವೇರಿಸಿದರು. ನಂತರ ನಿತ್ಯಾನುಷ್ಠಾನ, ಸಂದ್ಯಾವಂದನೆ ಸಹಿತವಾಗಿ ನೂತನ ಜನಿವಾರವನ್ನು ಧರಿಸಿ ಪ್ರಾರ್ಥನೆ ಸಲ್ಲಸಿದರು.

ಬಸವನಗುಡಿಯಲ್ಲಿರುವ ಉತ್ತರಾದಿ ಮಠ, ಪುತ್ತಿಗೆ ಮಠ, ವ್ಯಾಸರಾಜ ಮಠಗಳಲ್ಲಿ ಕೂಡಾ ಉಪಕರ್ಮದ ಅಂಗವಾಗಿ ನೂತನ ಜನಿವಾರವನ್ನು ಧರಿಸಿ ಸಾಧಕರು ಪೂಜೆ-ಪ್ರಾರ್ಥನೆ ಸಲ್ಲಿಸಿದರು. ಮಲ್ಲೇಶ್ವರದಲ್ಲಿರುವ ಪಲಿಮಾರು ಮಠ ಹಾಗೂ ಶ್ರೀದಿಗ್ವಿಜಯನ ಲಕ್ಷ್ಮಿ ನರಸಿಂಹ ಸ್ವಾಮಿ ಮಂದಿರದಲ್ಲೂ ಸಾಮೂಹಿಕ ಉಪಕರ್ಮ ವಿಧಿ ಆಚರಿಸಲಾಯಿತು. ಆಧ್ಯಾತ್ಮಿಕ ಚಿಂತಕರಾದ ರಾಜಗುರು ಬಿ.ಎಸ್.ದ್ವಾರಕಾನಾಥ್‌ರವರ ನಿವಾಸದಲ್ಲಿ ಉಪಾಕರ್ಮದ ಪ್ರಯುಕ್ತ ವಿಶೇಷ ಗಾಯತ್ರಿ ಹೋಮ ಮತ್ತು ಪೂಜೆ ನೆರವೇರಿಸಿ ಪುತ್ರ, ಪೌತ್ರಾದಿಗಳೊಂದಿಗೆ ನೂತನ ಯಜ್ಞೋಪವೀತವನ್ನು ಧರಿಸಿ ಗಾಯಿತ್ರಿ ಉಪಾಸನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net