ಉಪಜಾತಿ ಬಿಡಿ, ಅಭಿವೃದ್ಧಿಗೆ ಒಗ್ಗೂಡಿ: ನೇಕಾರ ಸಮುದಾಯಕ್ಕೆ ಡಿ. ಕೃಷ್ಣಯ್ಯ ಸಲಹೆ

8 RMN NEKARARA SANGHA
Published on

ರಾಮನಗರ: ನೇಕಾರರು ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕಾದರೆ ಸಂಘಟಿತರಾಗಬೇಕು ಎಂದು ಪದ್ಮಪೀಠ ನೇಕಾರ ಸಮುದಾಯಗಳ ಪದ್ಮಶಾಲಿ ರಾಜ್ಯ ಉಪಾಧ್ಯಕ್ಷ ಡಿ. ಕೃಷ್ಣಯ್ಯ ತಿಳಿಸಿದರು.

ನಗರದ ಬಾಲಾಜಿ ನಗರ ಬಡಾವಣೆಯಲ್ಲಿ ಭಾನುವಾರ ರಾಮನಗರ-ಚನ್ನಪಟ್ಟಣ ನೇಕಾರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ನೇಕಾರರ ಸಮಾಜದಲ್ಲಿ ಹಲವು ಪಂಗಡಗಳಿದ್ದು, ಹೀಗಾಗಿ ಸಮಾಜದಲ್ಲಿ ಒಗ್ಗಟ್ಟು ಮೂಡುತ್ತಿಲ್ಲ. ನೇಕಾರರ ಪ್ರಮುಖ 10 ಪಂಗಡಗಳಲ್ಲಿ 49 ಉಪ ಪಂಗಡಗಳು ಅಸ್ತಿತ್ವದಲ್ಲಿವೆ. ನೇಕಾರರ ವೃತ್ತಿ ಒಂದೆಯಾದರೂ ನೇಕಾರರು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ನೇಕಾರಿಕೆಗಿಂತ ಉಪಜಾತಿಗಳನ್ನು ಪ್ರಧಾನವಾಗಿ ಹೇಳುತ್ತಿದ್ದಾರೆ. ಈ ಕಾರಣದಿಂದಾಗಿಯೇ ನೇಕಾರರು ಹಿಂದುಳಿದಿದ್ದು, ನಮ್ಮ ಸಮುದಾಯದ ಶಕ್ತಿ ಯಾರಿಗೂ ಗೊತ್ತಾಗುತ್ತಿಲ್ಲ. ರಾಜಕೀಯ ಹಿತಾಸಕ್ತಿಗೆ ಉಪಜಾತಿ ಮರೆತು ನೇಕಾರರು ಒಗ್ಗೂಡಬೇಕಿದೆ ಎಂದು ತಿಳಿಸಿದರು.

ನೇಕಾರ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇತರ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ವೃತ್ತಿಯಲ್ಲಿಯೂ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗದೆ ಅತಂತ್ರರಾಗುತ್ತಿದ್ದಾರೆ. ಇನ್ನಾದರೂ ಸಮಾನ ಹಕ್ಕು ಪಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ನೇಕಾರ ಮಹಿಳೆಯರು ಆರ್ಥಿಕ, ಸಾಮಾಜಿಕ ಸಬಲೀಕರಣಗೊಳ್ಳಬೇಕು. ಸ್ಥಾನಮಾನದ ಪ್ರಗತಿ ಹೊಂದಬೇಕು. ನೇಕಾರರ ವೃತ್ತಿಗೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಹಲವು ಸೌಲಭ್ಯಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದರು.

ದೇವಾಂಗ ಸಂಘದ ಕುದೂರು ರಾಜಶೇಖರ್, ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಂ.ಎಸ್.ಅಣ್ಣಯ್ಯಪ್ಪ, ಅಧ್ಯಕ್ಷರಾದ ವಿದ್ಯುತ್ ಗುತ್ತಿಗೆದಾರ ವರದರಾಜು, ಉಪಾಧ್ಯಕ್ಷ ಟಿ.ಎಸ್.ಮಹೇಶ್, ಜಿ.ಕೆ.ರಂಗನಾಥ್, ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ವಿ.ನಾಗೇಶ್‌ಕುಮಾರ್, ಖಜಾಂಚಿ ಗಿರೀಶ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಮೂರ್ತಿ, ಸತ್ಯನಾರಾಯಣ ಇತರರು ಉಪಸ್ಥಿತರಿದ್ದರು.

ನೇಕಾರರು ಇಡೀ ಬದುಕು ಮಗ್ಗದ ಗುಂಡಿಯಲ್ಲಿಯೇ ಸೀಮಿತವಾಗಿದೆ. ಕುಲಕಸುಬು ಅವಲಂಬಿಸಿ ಹೆಚ್ಚಿನ ಪ್ರಮಾಣದಲ್ಲಿ ಅನಕ್ಷರಸ್ಥರಾಗಿದ್ದು, ಪ್ರಪಂಚ ಜ್ಞಾನದಿಂದ ವಂಚಿತರಾಗಿದ್ದಾರೆ. 40 ಲಕ್ಷಕ್ಕೂ ಹೆಚ್ಚು ಸಮುದಾಯದ ಜನರಿದ್ದರೂ ಸಂಘಟಿತರಾಗದಿರಲು ಇದೇ ಕಾರಣ. -ಡಿ.ಕೃಷ್ಣಯ್ಯ, ಪದ್ಮಪೀಠ ನೇಕಾರ ಸಮುದಾಯಗಳ ಪದ್ಮಶಾಲಿ ರಾಜ್ಯ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net