

ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಡಾ. ಯು.ಪಿ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಸಂಶೋಧನಾ ಪ್ರಶಸ್ತಿಗೆ ಸಂಶೋಧಕ ಮತ್ತು ಲೇಖಕ ಡಾ. ಎಸ್.ಆರ್. ವಿಘ್ನರಾಜ್ ಆಯ್ಕೆಯಾಗಿದ್ದಾರೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಆಗಸ್ಟ್ 9ರಂದು ಉಡುಪಿ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ.
1958ರಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಕನ್ಯಾಡಿಯಲ್ಲಿ ಜನಿಸಿದ ಡಾ. ಎಸ್. ಆರ್. ವಿಘ್ನರಾಜ್ ಆರಂಭಿಕ ಶಿಕ್ಷಣವನ್ನು ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪೂರೈಸಿ, ಎಂ.ಎ ಸಂಸ್ಕೃತ ಪದವಿಯನ್ನು ಮೈಸೂರು ವಿ.ವಿಯಿಂದ ಪಡೆದಿದ್ದಾರೆ. ಮಂಗಳೂರು ವಿ.ವಿಯಿಂದ ಕರ್ನಾಟಕದ ಜೈನ ಸಂಸ್ಕೃತ ಕವಿಗಳು ಎಂಬ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ದೊರಕಿದೆ. ಎಂ.ಜಿ.ಎಂ ಕಾಲೇಜು ಉಡುಪಿಯಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿ, ಉಜಿರೆ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಲ್ಲಿ ಸಂಶೋಧಕರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತುಮಕೂರು ವಿವಿಯಲ್ಲಿ ಸಂಶೋಧನ ಮಾರ್ಗದರ್ಶಕರಾಗಿದ್ದಾರೆ.