ಪ್ರೇಕ್ಷಕರಿಂದ ಸೈ ಎನಿಸಿಕೊಂಡ ಉಪಾಧ್ಯಕ್ಷ, ಖುಷಿ ಹಂಚಿಕೊಂಡ ನಾಯಕನಟ ಚಿಕ್ಕಣ್ಣ

IMG_20240203_132647_501.jpg
Published on

ಹುಬ್ಬಳ್ಳಿ: ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಳೆದ ವಾರ ತೆರೆ ಕಂಡಿರುವ "ಉಪಾಧ್ಯಕ್ಷ' ಕನ್ನಡ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಾಯಕನಟ ಚಿಕ್ಕಣ್ಣ ಸಂತೋಷ ಹಂಚಿಕೊಂಡರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕ-ಯುವತಿಯರು ಅಷ್ಟೇ ಅಲ್ಲ ಕುಟುಂಬ ಸಮೇತರಾಗಿ ಜನರು ಚಿತ್ರ ನೋಡಿ ಸಂಭ್ರಮಿಸುತ್ತಿದ್ದಾರೆ. ಚಿತ್ರತಂಡಕ್ಕೆ ಇದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ ಎಂದರು.

ಎರಡನೇ ವಾರದಲ್ಲಿ ರಾಜ್ಯದ ಎಲ್ಲ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿಯೂ ಉಪಾಧ್ಯಕ್ಷ ಚಿತ್ರ ಪ್ರದರ್ಶನ ಕಾಣಲಿದೆ. ಮಹಿಳೆಯರು ಚಿತ್ರ ನೋಡಲು ಬರುತ್ತಿದ್ದಾರೆ ಎಂದರೆ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಕೌಟುಂಬಿಕ ಚಿತ್ರ ಧೈರ್ಯವಾಗಿ ಮಾಡಬಹುದು ಎನಿಸಿದೆ ಎಂದರು.

ಹುಬ್ಬಳ್ಳಿಯ ಪ್ರಸಿದ್ಧ ಶ್ರೀಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದೆ. ಚಿತ್ರಮಂದಿರಗಳಿಗೂ ಭೇಟಿ ನೀಡುವೆ. ಈ ಭಾಗದ ಚಿತ್ರಪ್ರೇಮಿಗಳಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

ಚಿತ್ರದ ಡಬ್ಬಿಂಗ್ ವಿಚಾರ ಇಲ್ಲ. ಜನರಿಗೆ ಕಾಮಿಡಿ ಬೇಕು ಎನಿಸಿದೆ. ಅದನ್ನೆ ಮಾಡಿದ್ದೇವೆ. ಇನ್ನಷ್ಟು ಜನ ಥೇಟರ್ಗೆ ಬರುವಂತೆ ಮಾಡಬೇಕಾಗಿದೆ ಎಂದು ಹೇಳಿದರು.

ವಿತರಕ ಪ್ರವಿಣ ಮಾತನಾಡಿ, ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ ಎಂದರು.

ನಟ ಧರ್ಮಣ್ಣ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಚಿತ್ರ ಗೆದ್ದರೆ ಅದು ಯಶಸ್ವಿಯಾದಂತೆಯೇ. ನಾಯಕ ಚಿಕ್ಕಣ್ಣ ಅವರ ಡ್ಯಾನ್ಸ್ ಅದ್ಭುತವಾಗಿ ಮೂಡಿ ಬಂದಿದೆ. ಪ್ರತಿಯೊಬ್ಬರು ಚಿತ್ರ ಮಂದಿರದಲ್ಲಿ ವೀಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಶ್ರೀನಿವಾಸ ಇತರರು ಉಪಸ್ಥಿತರಿದ್ದರು.

ಅಪ್ಸರಾ ಚಿತ್ರಮಂದಿರಕ್ಕೆ ಭೇಟಿ ನೀಡಿದ ನಾಯಕ ನಟ ಚಿಕ್ಕಣ್ಣ ಅವರು, ಪ್ರೇಕ್ಷಕರೊಂದಿಗೆ ಕೆಲಕಾಲ ಉಪಾಧ್ಯಕ್ಷ ಚಿತ್ರ ವೀಕ್ಷಣೆ ಮಾಡಿದರು. ಅನೇಕ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net