31ರ ವರೆಗೂ ಜಿಲ್ಲೆಯಲ್ಲಿ ಕಟ್ಟೆಚ್ಚರ

20MKH1-Web
ಎಂ.ಕೆ.ಹುಬ್ಬಳ್ಳಿಯ ಶರಣೆ ಗಂಗಾಂಬಿಕಾ ಐಕ್ಯಮಂಟಪ.
Published on

ಬೆಳಗಾವಿ: ಜಿಲ್ಲಾದ್ಯಂತ ಕೋವಿಡ್-19 (ಕರೊನಾ ವೈರಾಣು ಕಾಯಿಲೆ-19) ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಾಂಕ್ರಾಮಿಕ ರೋಗ ಕಾಯ್ದೆ 1897 ಮತ್ತು "The Karnataka Epidemic Diseases, COVID-19 Regulations, 2020"(12)ರ ಪ್ರಕಾರ ಮಾ. 31ರ ವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ಪ್ರಕಾರ ಪ್ರತಿಬಂಧಕಾಜ್ಞೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಈಗಾಗಲೇ ಮಾ. 13ರಿಂದ ಮಾ. 20ರ ವರೆಗೆ ಜಾರಿಯಲ್ಲಿದ್ದ ಪ್ರತಿಬಂಧಕಾಜ್ಞೆಯನ್ನು 31ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ. ಎಸ್. ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಪ್ರತಿಬಂಧಕಾಜ್ಞೆ ಆದೇಶವನ್ನು ಜಾರಿಗೊಳಿಸಲು ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು ಹಾಗೂ ಜಿಲ್ಲೆಯ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಆದೇಶದಲ್ಲೇನಿದೆ?: ಆದೇಶದ ಪ್ರಕಾರ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಿದೆ. ಬೆಳಗಾವಿ ಜಿಲ್ಲೆಗೆ ಆಗಮಿಸುವ ಎಲ್ಲ ಅಂತಾರಾಷ್ಟ್ರೀಯ/ಭಾರತೀಯ (ಯಾವುದೇ ದೇಶಕ್ಕೆ ಭೇಟಿ ನೀಡಿರಲಿ) ಹಾಗೂ ವಿದೇಶಿಯರು ಬೆಳಗಾವಿ ಜಿಲ್ಲೆಗೆ ಆಗಮಿಸುವಾಗ ಅವರಿಗೆ ರೋಗ ಲಕ್ಷಣ ಇಲ್ಲದಿದ್ದರೂ ಸಹ ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರುವುದು. ಕೋವಿಡ್-19 ಹರಡುವುದನ್ನು ತಡೆಗಟ್ಟಲು ಈ ಕ್ರಮಗಳನ್ನು ಕೈಗೊಳ್ಳಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೂ ಬ್ರೇಕ್: ಜಿಲ್ಲಾದ್ಯಂತ ಸಿನಿಮಾ ಮಂದಿರಗಳು, ಮಾಲ್‌ಗಳು, ನಾಟಕಗಳು, ರಂಗಮಂದಿರಗಳು, ಪಬ್‌ಗಳು, ಸ್ಟೇಟ್‌ಕ್ಲಬ್‌ಗಳು, ವಸ್ತು ಪ್ರರ್ದಶನಗಳು, ಸಂಗೀತ ಹಬ್ಬಗಳು, ಕ್ಲಬ್‌ಗಳು, ಮ್ಯಾರಥಾನ್, ಕ್ರೀಡಾಂಗಣದಲ್ಲಿ ಹೆಚ್ಚಿನ ಪ್ರೇಕ್ಷಕರು ವೀಕ್ಷಿಸುವ ಕ್ರೀಡಾ ಕೂಟಗಳಾದ ಕ್ರಿಕೆಟ್, ಫುಟ್‌ಬಾಲ್, ಬಾಸ್ಕೆಟ್‌ಬಾಲ್, ಹಾಕಿ ಮತ್ತು ಹೆಚ್ಚಾಗಿ ಜನರು ಸೇರುವಂತಹ ಮದುವೆ ಕಾರ್ಯಕ್ರಮಗಳನ್ನು ನಡೆಸದಿರುವುದು, ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಜಾತ್ರೆಗಳಿಗೆ ಆದಷ್ಟು ಕಡಿಮೆ ಸಂಖ್ಯೆಯ ಜನರು ಭಾಗವಹಿಸುವುದು. ಬೇಸಿಗೆ ಶಿಬಿರಗಳು, ಸಭೆ-ಸಮಾರಂಭಗಳು, ಕ್ರೀಡಾಕೂಟಗಳು, ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಬಾರದು.

ಹೆಚ್ಚು ಜನ ಬಳಸುವ ಸ್ವಿಮ್ಮಿಂಗ್ ಪೂಲ್, ಜಿಮ್ ಮುಂತಾದವುಗಳನ್ನು ಮುಚ್ಚುವುದು. ಹೆಚ್ಚಾಗಿ ವಿದೇಶಗಳಿಗೆ ಪ್ರಯಾಣಿಸಿಸುವ ಐಟಿ, ಬಿಟಿ. ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.

ಉಲ್ಲಂಸಿದರೆ ಕಾನೂನು ಕ್ರಮ

ಖಾಸಗಿ ವೈದ್ಯರುಗಳು, ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್‌ಗಳು ೆ. 21ರ ನಂತರ ವಿದೇಶದಿಂದ ಬಂದು ರೋಗ ಲಕ್ಷಣಗಳು ಇರುವ ರೋಗಿಗಳು ಇದ್ದಲ್ಲಿ ತಡಮಾಡದೆ ಕಡ್ಡಾಯವಾಗಿ ಜಿಲ್ಲಾ ಆರೋಗ್ಯಾಧಿಕಾರಿ ದೂರವಾಣಿ /ಫ್ಯಾಕ್ಸ್ / 104 ಸಹಾಯವಾಣಿ ಮೂಲಕ ತಿಳಿಸಲು ಕ್ರಮ ಕೈಗೊಳ್ಳುವುದು. ಪ್ರತಿಯೊಬ್ಬರೂ ತಮ್ಮಿಂದ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು ಮತ್ತು ಯಾರನ್ನೂ ಮುಟ್ಟಕೂಡದು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಪರೀಕ್ಷೆಗಳು ಮತ್ತು ಸರ್ಕಾರಿ ಕಚೇರಿಗಳು ಅಬಾಧಿತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿರುವ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಅವರು, ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net