ಮುದಗಲ್: ಪಟ್ಟಣ ಸಮೀಪದ ಕನ್ನಾಳ ಗ್ರಾಮ ಪಂಚಾಯಿತಿಗೆ ಸೋಮವಾರ ಸಂಜೆ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೇಟಿ ನೀಡಿ, ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಜಿಪಂನಿಂದ ಗ್ರಾಪಂಗೆ ಮಂಜೂರಾದ 50 ದನದ ಶೆಡ್‌ಗಳನ್ನು ಪ್ರಭಾವಿ ಮೂವರು ಸದಸ್ಯರು ಹೆಸರು ಸೂಚಿಸಿದವರಿಗೆ ನೀಡಲಾಗಿದೆ. ನಾನು ಉಪಾಧ್ಯಕ್ಷನಾಗಿ ಎರಡು ವರ್ಷ ಕಳೆದರೂ ಜನರಿಗೆ ಎರಡು ಶೆಡ್ ಕೊಡಲು ಆಗಿಲ್ಲ ಎಂದು ಗ್ರಾಪಂ ಉಪಾಧ್ಯಕ್ಷ ಹನುಮಂತ ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದರು. ಹೀಗಾಗಿ ಶಾಸಕರು ತಾಪಂ ಇಒ ಅಮರಪ್ಪ ಮತ್ತು ಪಿಡಿಒ ಜೆ.ಮಲ್ಲಿಕಾರ್ಜುನ ಅವರನ್ನು ತರಾಟೆಗೆ ತಗೆದುಕೊಂಡರು. ಸರ್ಕಾರದ ಸೌಲಭ್ಯಗಳನ್ನು ಎಲ್ಲರಿಗೂ ಸರಿಸಮವಾಗಿ ವಿತರಿಸಬೇಕು. ಒಬ್ಬರ ಆಣತಿಯಂತೆ ಜಾರಿಮಾಡಿದರೆ ಸಮಸ್ಯೆಯಾಗಲಿದ್ದು, ಅರ್ಹರಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಆದ್ದರಿಂದ ಈಗ ನೀಡಿದ ದನದ ಶೆಡ್‌ಗಳನ್ನು ರದ್ದುಪಡಿಸುವಂತೆ ಸೂಚಿಸಿದರು. ಗ್ರಾಪಂನಲ್ಲಿ ಯಾರಿಗೂ ತಾರತಮ್ಯ ಮಾಡದೆ ಎಲ್ಲರಿಗೂ ಸಮನಾಗಿ ಕೆಲಸ ಮಾಡುವಂತೆ ಹೇಳಿದರು. ಇದಕ್ಕೂ ಮುನ್ನ ಸರ್ಕಾರಿ ಪ್ರೌಢಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿದ ಶಾಸಕರು ಗುಣಮಟ್ಟದ ಶಿಕ್ಷಣ ನೀಡುವಂತೆ ಸೂಚಿಸಿದರು.
ಅಂಗನವಾಡಿಗಳಿಗೆ ಬೇಕಾಗುವ ಅಗತ್ಯ ಸೌಲಭ್ಯಹಾಗೂ ಇತರ ಹೆಚ್ಚುವರಿ ಕಟ್ಟಡಗಳ ಬಗ್ಗೆ ಬೇಡಿಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮಸ್ಕಿ ತಾಪಂ ಇಒ ಅಮರಪ್ಪ ಯಾದವ್, ಜೆಸ್ಕಾಂ ಎಇಇ ವೆಂಕಟೇಶ್, ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಪರಮೇಶ್ವರ್, ಕೆಇಬಿ ಎಸ್.ಒ. ತಿರುಪತಿ, ಪಿಆರ್‌ಡಿ ಎಇಇ ಹನುಮಂತಪ್ಪ ಇಂಜನಿಯರ್‌ಗಳಾದ ನಾಗರಾಜ್, ಶರೀಫ್, ನಿರ್ಮಿತಿ ಕೇಂದ್ರ ಇಂಜಿನಿಯರ್ ಪ್ರವೀಣ್, ಕೆಆರ್‌ಡಿಎಲ್ ಇಂಜಿನಿಯರ್ ಕಾಶಿನಾಥ್ ಇತರರಿದ್ದರು.
ಸರ್ಕಾರದ ಅನುದಾನ ದುರ್ಬಳಕೆಯಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು. ಸೌಲಭ್ಯಗಳ್ನು ಸಾರ್ವಜನಿಕ ವಲಯದಲ್ಲಿ ಸದ್ಬಳಕೆಯಾಗುವಂತೆ ಹಂಚಿಕೆ ಮಾಡುವಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಬಸನಗೌಡ ತುರುವಿಹಾಳ ಮಸ್ಕಿ ಶಾಸಕ