ಅಗಲೀಕರಣಗೊಳ್ಳದ ಅಂತಾರಾಜ್ಯ ಮಾರ್ಗ

FotoJet darshini
Published on

ಕೋಲಾರ ಮತ್ತು ಆಂಧ್ರ ರಸ್ತೆಯಲ್ಲಿ ಗುಂಡಿಗಳ ದರ್ಬಾರ್​

ಎನ್​.ಮುನಿವೆಂಕಟೇಗೌಡ ಕೋಲಾರ: ಕೋಲಾರದಿಂದ ಶ್ರೀನಿವಾಸಪುರ ಮೂಲಕ ಆಂಧ್ರಪ್ರದೇಶದ ಮದನಪಲ್ಲಿ, ತಿರುಪತಿ, ಟ್ಠಂಗನೂರು ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಕಿರಿದಾಗಿದ್ದು, ವಾಹನ ಸವಾರರಿ ಪರದಾಡುವಂತಾಗಿದೆ.

ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ದಿನಕ್ಕೆ ಸಾವಿರಾರು ವಾಹನಗಳು ಸಂಚಸುವಂತಾಗಿದೆ. ಇರುವ ರಸ್ತೆಯು ಕೋಲಾರದಿಂದ ವಳಗೇರನಹಳ್ಳಿ ಗ್ರಾಸ್​ವರೆಗೆ ದುರಸ್ತು ಕಾಣದಂತಾಗಿದ್ದು, ದ್ವಿಚಕ್ರ ವಾಹನ ಸವಾರರು ರಸ್ತೆಯ ಗುಂಡಿಗಳಲ್ಲಿ ಬಿದ್ದು ಗಾಯಗೊಂಡ ಹಲವು ನಿದರ್ಶನಗಳಿವೆ.

ಜಿಲ್ಲೆಯಿಂದ ವಿವಿಧ ತಾಲೂಕುಗಳಿಗೆ ಹೋಗುವ ಎಲ್ಲ ರಸ್ತೆಗಳಿಗೆ ಅಭಿವೃದ್ಧಿ ಭಾಗ್ಯ ಕಂಡರೂ, ಕೋಲಾರದಿಂದ ಶ್ರೀನಿವಾಸಪುರಕ್ಕೆ ಹೋಗುವ ರಸ್ತೆ ಅಗಲೀಕರಣಗೊಂಡಿಲ್ಲ. ದುರಸ್ತಿ ಕಾಣದಂತಾಗಿದ್ದು, ಮೂರಂಡಹಳ್ಳಿ ಗೇಟ್​ನಿಂದ ವಳಗೇರನಹಳ್ಳಿ ಕ್ರಾಸ್​ ವರೆಗೆ ಮೊಣಕಾಲುದ್ದ ಗುಂಡಿಗಳುಬಿದ್ದಿವೆ.

ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದಾಗಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು ಮತ್ತಷ್ಟು ಬಾಯಿ ತೆಗೆದುಕೊಂಡಿದ್ದು, ಮಳೆಯ ನೀರು ಹಳ್ಳಗಳಲ್ಲಿ ನಿಂತು ರಸ್ತೆ ಯಾವುದು?, ಹಳ್ಳ ಯಾವುದು? ಎಂಬುದು ಗೊತ್ತಾಗುತ್ತಿಲ್ಲ.

ಲೋಕೋಪಯೋಗಿ ಇಲಾಖೆಯವರು ಆಗಾಗ ಹಳ್ಳಗಳಿಗೆ ಒಂದಷ್ಟು ಮಣ್ಣು ಮತ್ತು ಜಲ್ಲಿ ಹಾಕಿ ಕೈತೊಳೆದುಕೊಳ್ಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಮತ್ತೆ ಯಾಥಾಸ್ಥಿತಿ ಮಳೆ ಬಂದರೆ ಹಳ್ಳಗಳು ಬಿದ್ದು, ನೀರು ತುಂಬುತ್ತಿವೆ. ಕಳೆದ ಒಂದು ವಾರದಿಂದ ರಸ್ತೆಯಲ್ಲಿ ದ್ವಿಚಕ್ರವಾಹನಗಳು ಓಡಾಡದಂತಹ ಪರಿಸ್ಥಿತಿ ನಿಮಾರ್ಣವಾಗಿವೆ.

ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಹೋಗುವುದು ಇದೇ ರಸ್ತೆ ಬಳಕೆ ಮಾಡುತ್ತಾರೆ. ಶ್ರೀನಿವಾಸಪುರದಿಂದ ಆಂಧ್ರ ಗಡಿಭಾಗ 40 ಕಿ.ಮೀ. ಇರುವುದರಿಂದ ಆ ಭಾಗದಿಂದ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಟೊಮ್ಯಾಟೊ ಮತ್ತು ತರಕಾರಿ ತುಂಬಿದ ನೂರಾರು ಟೆಂಪೊ ಮತ್ತು ಲಾರಿಗಳು ಪ್ರತಿದಿನ ಸಂಚರಿಸುತ್ತಿವೆ.

ದುರಸ್ತಿ ಕಾಣದ ಮುದುವಾಡಿ ಕೋಡಿ : ಮುದುವಾಡಿ ಕೋಡಿ ದುರಸ್ತಿ ಕಾಣದಂತಾಗಿದ್ದು, ಕೋಡಿ ಮತ್ತು ಅದರ ಹಿಂದೆ ಮತ್ತು ಮುಂದಿನ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ರಾತ್ರಿ ವಾಹನ ಸಂಚಾರ ಕಷ್ಟವಾಗಿದ್ದು, ಕಳೆದ 2 ವರ್ಷಗಳ ಹಿಂದೆ ಆಗಿನ ಸಂಸದ ಎಂ.ಮುನಿಸ್ವಾಮಿ ರಸ್ತೆಯಲ್ಲಿ ನಿಂತು ಕೋಡಿ ರಿಪೇರಿ ಮಾಡಿಸಿದರು. ಆದರೆ ಮತ್ತೆ ಅದು ಹಾಳಾಗಿದ್ದು, ವಾಹನಗಳು ಸಂಚಾರ ಮಾಡಲು ಯೋಗ್ಯವಲ್ಲದಂತಾಗಿದೆ.

10 ಕೋಟಿ ರೂ. ವೆಚ್ಚ : ಕಳೆದ 15 ದಿನಗಳ ಹಿಂದೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು 10 ಕೋಟಿ ರೂ. ವೆಚ್ಚದಲ್ಲಿ ರಸ್ತೆ ದುರಸ್ತಿ ಮತ್ತು ಅಗಲೀಕರಣಕ್ಕೆ ಭೂಮಿಪೂಜೆ ನೆರವೇರಿಸಿದ್ದು, ತಕ್ಷಣ ಕಾಮಗಾರಿ ಪ್ರಾರಂಭಿಸಿ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು. ಆದರೆ ಇನ್ನೂ ಕಾಮಗಾರಿ ಪ್ರಾರಂಭಗೊಂಡಿಲ್ಲ. ಮಳೆಗಾಲದಲ್ಲಿ ಬಿದ್ದಿರುವ ಗುಂಡಿಗಳಿಗೆ ಜಲ್ಲಿ ತುಂಬುವ ಕೆಲಸವಾದರೂ ಮಾಡಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಕೋಲಾರ&ಶ್ರೀನಿವಾಸಪುರ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದೋ, ಇಲ್ಲವೋ ಎಂಬ ಗೊಂದಲ ಇದೆ. ಸದರಿ ರಸ್ತೆ ದುರಸ್ತಿಗೊಂಡು ವರ್ಷಗಳೇ ಕಳೆದಿವೆ. ಪ್ರತಿವರ್ಷ ಮಳೆ ಮುಗಿದ ನಂತರ ತೇಪೆ ಹಾಕುವ ಕೆಲಸ ಮಾಡುತ್ತಾರೆ. ಆಗ ಗುತ್ತಿಗೆದಾರ ದೊಡ್ಡ ದೊಡ್ಡ ಗುಂಡಿ ಮುಚ್ಚಿ ಸಣ್ಣ ಗುಂಡಿಗಳನ್ನು ಹಾಗಿಯೆ ಬಿಡುತ್ತಾರೆ. ಅವು ಮತ್ತೆ ದೊಡ್ಡದಾಗುತ್ತಿವೆ. ಇದು ತೇಪೆ ಹಾಕುವ ನೆಪದಲ್ಲಿ ದುಡ್ಡು ಹೊಡೆಯುವ ದಂಧೆಯಾಗಿದೆ. ರಸ್ತೆ ಅಗಲೀಕರಣಗೊಂಡಿಲ್ಲ, ದುರಸ್ತಿಯೂ ಆಗಿಲ್ಲ. ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಂಡು ರಸ್ತೆ ಪ್ರಗತಿ ಕೈಗೊಳ್ಳಲಿ. ಸಂಪತ್​ಕಿತ್ತಂಡೂರು ನಿವಾಸಿಕೋಲಾರ&ಶ್ರೀನಿವಾಸಪುರ ರಸ್ತೆಯ ಮುದುವಾಡಿ ಕೋಡಿಯಿಂದ ವಳಗೇರನಹಳ್ಳಿ ಕ್ರಾಸ್​ ಮೂಲಕ ಹೂಹಳ್ಳಿ ತನಕ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, 3 ತಿಂಗಳಲ್ಲಿ ಕಾಮಗಾರಿ ಮುಗಿಸಲಿದ್ದಾರೆ. ಮುದುವಾಡಿ ಕೋಡಿ ಮೇಲೆ ಬಿದ್ದಿರುವ ಹಳ್ಳಗಳನ್ನು 2 ರಿಂದ 3ದಿನದ ಒಳಗೆ ಮುಚ್ಚಿಸುವ ಕೆಲಸ ಮಾಡಲಾಗುವುದು. ವೀರಾಪುರ ಮತ್ತು ಮೂರಂಡಹಳ್ಳಿ ಬಳಿ ಬಿದ್ದಿರುವ ಹಳ್ಳಗಳನ್ನು ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು.ಜಿ.ಕೆ.ವೆಂಕಟಶಿವಾರೆಡ್ಡಿಶ್ರೀನಿವಾಸಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net