

ಪ್ರಶಾಂತ ಭಾಗ್ವತ ಉಡುಪಿ
ನಗರದ ಮುಖ್ಯ ರಸ್ತೆಯಿಂದ ವಿವಿಧ ವಾರ್ಡ್ಗಳಿಗೆ ಸಂಪರ್ಕ ಮಾಡುವ ರಸ್ತೆಗಳ ಅಕ್ಕ-ಪಕ್ಕದಲ್ಲಿ ವಿಪುಲವಾಗಿ ಅನಗತ್ಯ ಗಿಡ-ಗಂಟಿ ಬೆಳೆದಿದ್ದು, ಮಾರ್ಗವನ್ನೂ ಕಿರಿದಾಗಿಸಿದೆ.
ವಾರ್ಡ್ ಸಂಪರ್ಕದ ರಸ್ತೆಗಳಾಗಿದ್ದರಿಂದ ಅಗಲ ಕಡಿಮೆ ಇದ್ದು, ಅಲ್ಲಿಯೇ ಗಿಡ-ಗಂಟಿ ಬೆಳೆದುಕೊಂಡಿದ್ದರಿಂದ ಸುಗಮ ಸಂಚಾರಕ್ಕೂ ತೊಡಕಾಗಿದೆ. ಆಟೋ ಅಥವಾ ಕಾರುಗಳು ಎದುರು-ಬದುರು ಬಂದರೆ ಸಾಗಿ ಹೋಗಲೂ ಸಮಸ್ಯೆಯಾಗುತ್ತಿದೆ.
ಗಿಡ-ಗಂಟಿಗಳ ನಡುವೆಯೇ ಹುಟ್ಟಿಕೊಂಡ ವಿವಿಧ ಬಗೆಯ ಬಳ್ಳಿಗಳೂ ಸಹ ಅಲ್ಲಿರುವ ಸಣ್ಣ-ಪುಟ್ಟ ಮರ ಹಾಗೂ ವಿದ್ಯುತ್ ಕಂಬಗಳನ್ನೂ ಆವರಿಸಿ ಬೆಳೆಯತೊಡಗಿದೆ. ವಿದ್ಯುತ್ ತಂತಿಗಳಿಗೆ ಸುತ್ತಿಕೊಳ್ಳುತ್ತ ಮುಂದೆ ಬೆಳೆಯುತ್ತಲೇ ಸಾಗುತ್ತಿದೆ. ಇದು ಮೆಸ್ಕಾಂನವರಿಗೂ ತಲೆನೋವಾಗಿ ಪರಿಣಮಿಸಿದೆ.
ವಾರ್ಡ್ಗಳಲ್ಲಿರುವ ಜನರು ನಗರಸಭೆಯ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಕಡೆ ಮರಗಳೂ ಅಪಾಯಕಾರಿಯಾಗಿ ರಸ್ತೆಗೆ ಬಾಗಿಕೊಂಡಿವೆ. ಅಧಿಕಾರಿಗಳು ಹಾಗೂ ಆಯಾ ವಾರ್ಡ್ನ ಸದಸ್ಯರು ಇನ್ನೂ ಅನಗತ್ಯ ವಿಳಂಬ ಮಾಡದೆ, ಅನಗತ್ಯವಾಗಿ ಬೆಳೆಯುತ್ತಿರುವ ಗಿಡ-ಗಂಟಿ ತೆರವು ಮಾಡಲು ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.
ಅನೇಕ ವಾರ್ಡ್ಗಳ ಸಂಪರ್ಕ ರಸ್ತೆಯೂ ಹದಗೆಟ್ಟಿದೆ. ಮಾರ್ಗದ ಅಲ್ಲಲ್ಲಿ ಬೃಹತ್ ಹೊಂಡಗಳು ಉಂಟಾಗಿದ್ದು, ಸಂಚಾರಕ್ಕೆ ತೊಡಕಾಗಿದೆ. ಮಳೆಗಾಲದ ಮೊದಲು ವಿವಿಧೆಡೆ ರಸ್ತೆಯ ಹೊಂಡಗಳಿಗೆ ತೇಪೆ ಹಾಕಲಾಗಿತ್ತು. ನಿರಂತರ ಮಳೆಯಿಂದಾಗಿ ತೇಪೆಗಳೆಲ್ಲಾ ಎದ್ದು ಮತ್ತೆ ರಸ್ತೆ ಹೊಂಡಮಯವಾಗಿದೆ.
ಪ್ರತಿವರ್ಷ ಮಳೆಗಾಲದ ಮೊದಲು ನಗರಸಭೆಯಿಂದ ಗುತ್ತಿಗೆದಾರರ ಮೂಲಕ ರಸ್ತೆ ಪಕ್ಕದ ಗಿಡ-ಗಂಟಿ ತೆರವು ಮಾಡಲಾಗುತ್ತಿತ್ತು. ಆದರೆ, ಜೂನ್ ಮುಗಿದು ಜುಲೈ ತಿಂಗಳು ಆರಂಭಗೊಂಡು ವಾರ ಕಳೆದರೂ ಸಹ ರಸ್ತೆ ಪಕ್ಕದ ಗಿಡ-ಗಂಟಿ ತೆರವು ಮಾಡಿಲ್ಲ. ಹಾವು ಸೇರಿದಂತೆ ವಿಷಜಂತುಗಳಿಗೆ ವಾಸಸ್ಥಾನ ಆಗುತ್ತಿದೆ. ಅನೇಕ ಮಕ್ಕಳು ಇಂತಹ ಮಾರ್ಗಗಳಲ್ಲಿ ನಡೆದೇ ಶಾಲೆಗೆ ಹೋಗುತ್ತಾರೆ. ಅವರಿಗೂ ಜೀವಾಪಾಯ ಆಗಬಹುದು. ಸಾರ್ವಜನಿಕರಿಗೂ ತೊಂದರೆ ಆಗುತ್ತಿದ್ದು ಕೂಡಲೇ ಗಿಡ-ಗಂಟಿ ತೆರವು ಮಾಡಬೇಕು. | ನಿತ್ಯಾನಂದ ಒಳಕಾಡು. ನಗರಸಭಾ ಮಾಜಿ ಸದಸ್ಯ ನಗರಸಭಾ ವ್ಯಾಪ್ತಿಯ ವಿವಿಧ ವಾರ್ಡ್ಗಳ ಸಂಪರ್ಕ ರಸ್ತೆಯಲ್ಲಿ ಬೆಳೆದಿರುವ ಗಿಡ-ಗಂಟಿ ಕಟಾವಿಗೆ ನಗರಸಭೆಯ ಪೌರ ಕಾರ್ಮಿಕರೊಂದಿಗೆ ಪ್ರತ್ಯೇಕವಾಗಿ 50 ಕೆಲಸಗಾರರನ್ನು ನೇಮಿಸಲಾಗಿದೆ. ಮಳೆಗಾಲಕ್ಕಾಗಿಯೇ ತಂಡವನ್ನೂ ರಚಿಸಲಾಗಿದೆ. ಎಲ್ಲೆಡೆ ಗಿಡ-ಗಂಟಿ ತೆರವು ಮಾಡಲಾಗುವುದು. ನಗರ ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳ ಗೆಲ್ಲುಗಳನ್ನು ಕಟಾವು ಮಾಡಲು 30 ಲಕ್ಷ ರೂ. ಅನುದಾನದ ಟೆಂಡರ್ ಕರೆಯಲು ಸಿದ್ಧತೆ ನಡೆದಿದೆ. | ಪ್ರಭಾಕರ ಪೂಜಾರಿ. ಉಡುಪಿ ನಗರಸಭಾ ಅಧ್ಯಕ್ಷ