ಗದಗ ಜಿಲ್ಲೆಗೆ ಬೇಡವಾದ ಜೋಳ ಹಾವೇರಿಗೆ

haveri Corn
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಆಹಾರ ಮತ್ತು ನಾಗರಿಕ ಸರಬಾಜು ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಕಸ, ಕಡ್ಡಿ, ಹುಳದಿಂದ ಕೂಡಿರುವ ಕಳಪೆ ಜೋಳ ವಿತರಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಇಂತಹ ಕಳಪೆ ಜೋಳವನ್ನು ಗದಗ ಜಿಲ್ಲೆಯ ಅಧಿಕಾರಿಗಳು ತಿರಸ್ಕರಿಸಿದ್ದರೂ ಹಾವೇರಿ ಜಿಲ್ಲೆ ಅಧಿಕಾರಿಗಳು ಸಂತೋಷದಿಂದ ಸ್ವೀಕರಿಸಿ, ಜನರಿಗೆ ಹಂಚಿಕೆ ಮಾಡುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ.

2024ರ ನವೆಂಬರ್ ಹಾಗೂ ಡಿಸೆಂಬರ್​ನಲ್ಲಿ ಸರಬರಾಜು ಮಾಡಿರುವ ಜೋಳ ತೀರಾ ಹಾಳಾಗಿತ್ತು. ಹುಳ, ಬಿಳಿ ಪೌಡರ್, ಬುಳುಸು ಬಂದಿರುವ ಜೋಳವನ್ನೇ ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಿಸಲಾಯಿತು. ಇಷ್ಟೊಂದು ಕಳೆಯಾಗಿರುವ ಜೋಳ ವಿತರಿಸಿದ್ದರಿಂದ ಹಲವು ಫಲಾನುಭವಿಗಳು ಅದನ್ನು ಬಳಸದೇ ತಿಪ್ಪೆಗೆ ಎಸೆದಿದ್ದಾರೆ. ಕೆಲವರು ದನಗಳಿಗೆ ಕೊಟ್ಟಿದ್ದಾರೆ. ಇಂತಹ ಜೋಳ ತಿಂದು ಅನಾರೋಗ್ಯಕ್ಕೆ ತುತ್ತಾದರೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಿದೆ.

ಗದಗ ಜಿಲ್ಲೆಯ ಅಧಿಕಾರಿಗಳು ಕಳಪೆಯಾಗಿರುವ ಜೋಳವನ್ನು ತಿರಸ್ಕರಿಸಿ, ಅಕ್ಕಿಯನ್ನು ಮಾತ್ರ ಪಡೆದುಕೊಂಡಿದ್ದಾರೆ. ಜೋಳದ ಗುಣಮಟ್ಟದ ಕುರಿತು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆದ ನಂತರವೇ ವಿತರಿಸಬೇಕು ಎಂದು ಆಹಾರ ಇಲಾಖೆಯ ಆಯುಕ್ತರು ಸ್ಪಷ್ಟವಾಗಿ ಸೂಚಿಸಿದ್ದಾರೆ. ಆದರೂ ಹಾವೇರಿ ಜಿಲ್ಲೆಯ ಉಪನಿರ್ದೇಶಕರು ಅತ್ಯಂತ ಕಳಪೆಯಾಗಿರುವ ಜೋಳವನ್ನು ಸ್ವೀಕರಿಸಿ ಯಾಕೆ ಹಂಚಿಕೆ ಮಾಡಿದರು? ಇದರ ಹಿಂದೆ ದೊಡ್ಡ ಅವ್ಯವಹಾರ ನಡೆದಿರಬಹುದೇ ಎಂಬ ಗುಮಾನಿ ವ್ಯಕ್ತವಾಗುತ್ತಿದೆ.

ಜಿಲ್ಲೆಗೆ ತಿಂಗಳಿಗೆ 30 ಸಾವಿರ ಕ್ವಿಂಟಾಲ್ ಜೋಳ ಹಂಚಿಕೆಯಾಗುತ್ತದೆ. ಇಷ್ಟೊಂದು ಪ್ರಮಾಣದ ಜೋಳವನ್ನು ಬಳ್ಳಾರಿ ಗೋದಾಮಿನಿಂದ ತರಿಸಲಾಗುತ್ತದೆ. ಗುಣಮಟ್ಟ ಪರೀಕ್ಷಿಸದೇ ಕೆಟ್ಟ ಪದಾರ್ಥವನ್ನು ತಂದು, ಹಂಚಿಕೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಇದರ ಹಿಂದೆ ನಡೆದಿದೆ ಎಂಬ ಅವ್ಯವಹಾರ ಆರೋಪದ ಕುರಿತು ತನಿಖೆ ನಡೆಸಿ, ಕ್ರಮ ಜರುಗಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

ಸರ್ಕಾರ ಮುನ್ನೆಚ್ಚರಿಕೆ ವಹಿಸಲಿ

2024ರ ಜುಲೈನಿಂದ 2025ರ ಜನವರಿವರೆಗೂ ಜಿಲ್ಲೆಗೆ ಇದೇ ಜೋಳ ಪೂರೈಸಲಾಗುತ್ತಿದೆ. ಆರಂಭದಲ್ಲಿ ಚೆನ್ನಾಗಿತ್ತು. ನಂತರದಲ್ಲಿ ಆರು ತಿಂಗಳು ಸಂಗ್ರಹಿಸಿ ಇಟ್ಟಿರುವ ಕಾರಣ ನವೆಂಬರ್, ಡಿಸೆಂಬರ್​ನಲ್ಲಿ ಹುಳ ಕಾಣಿಸಿಕೊಂಡಿವೆ. ಗದಗನವರಿಗೆ ಹಾಗೂ ಈ ತಿಂಗಳು ಧಾರವಾಡ ಜಿಲ್ಲೆಗೆ ಜೋಳ ಕೊಟ್ಟಿಲ್ಲ. ಇದನ್ನು ನಿರ್ಧರಿಸುವುದು ನಮ್ಮ ಕೈಯಲ್ಲಿ ಇಲ್ಲ. ಇಲಾಖೆ ನಿರ್ಧರಿಸುತ್ತದೆ. ಬೇರೆ ಜಿಲ್ಲೆಗೂ ಕೊಟ್ಟಿದ್ದಾರೆ. ಜೋಳ ಸರಿ ಇಲ್ಲ. ಬೇಡ ಎಂದು ನಾವೂ ಪತ್ರ ಬರೆದಿದ್ದೇವೆ. ಆದರೆ, ಈಗಾಗಲೇ ಖರೀದಿಸಿದ ಹಿನ್ನೆಲೆಯಲ್ಲಿ ಹಂಚಿಕೆ ಮಾಡಲೇಬೇಕಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊದಲ ಬಾರಿ ಜೋಳ ಹಂಚಿಕೆ ಮಾಡಲಾಗಿದ್ದು, ಇನ್ನುಮುಂದೆ ಇಂತಹ ಸಮಸ್ಯೆ ಆಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ.

ಉಸ್ತುವಾರಿ ಸಚಿವರು ಗಮನಿಸಲಿ

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕಳಪೆ ಜೋಳ ವಿತರಣೆಗೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಗದಗ ಜಿಲ್ಲೆಯ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಕಳಪೆಯಾಗಿರುವ ಜೋಳವನ್ನು ತೆಗೆದುಕೊಳ್ಳದೇ ಅಕ್ಕಿಯನ್ನು ಮಾತ್ರ ಕೊಟ್ಟಿದ್ದಾರೆ. ಆದರೆ, ಹಾವೇರಿ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳು ಅವ್ಯವಹಾರ ನಡೆಸುವ ಮೂಲಕ ಕಳಪೆಯಾಗಿದ್ದರೂ ಜೋಳವನ್ನು ಪಡೆದು ಜನರಿಗೆ ಹಂಚಿಕೆ ಮಾಡಿದ್ದಾರೆ. ಜನವರಿಯಲ್ಲಿ ಕಳಪೆಯಾಗಿರುವ ಜೋಳ ವಿತರಿಸಿದರೆ ಹೋರಾಟ ಮಾಡಲಾಗುವುದು. | ಹನುಮಂತಪ್ಪ ಕಬ್ಬಾರ, ರೈತ ಸಂಘ ಪಡಿತರ ಜೋಳವನ್ನು ನಾವು ಖರೀದಿಸಿಲ್ಲ. ಕಳೆದ ವರ್ಷ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಸರ್ಕಾರ ಖರೀದಿಸಿತ್ತು. ಇಲಾಖೆಯಿಂದಲೇ ಹಂಚಿಕೆ ಮಾಡಿದ್ದರಿಂದ ಜನವರಿಯಲ್ಲೂ ಇದನ್ನೇ ವಿತರಿಸಬೇಕಾದ ಅನಿವಾರ್ಯತೆ ಇದೆ. ಈ ತಿಂಗಳು ಪೌಡರ್ ಜರಡಿ ಮಾಡಿ ಸ್ವಚ್ಛಗೊಳಿಸಿದ ನಂತರವೇ ವಿತರಿಸಲಾಗುವುದು. | ರಮೇಶ ಎಂ.ಎಸ್., ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net