

ಗಂಗಾವತಿ: ಬೇಡವಾದ ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬೀಸಾಡದೇ, ಮಮತೆಯ ತೊಟ್ಟಿಲಿನಲ್ಲಿ ಹಾಕಿದರೆ ಮಗುವಿಗೆ ಉತ್ತಮ ಭವಿಷ್ಯ ದೊರೆಯಲಿದೆ ಎಂದು ಜೆಎಂಎ್ಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿದರು.
ನಗರದ ಬಸ್ ನಿಲ್ದಾಣದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಶಿಶು ಅಭಿವೃದ್ಧಿ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಮಮತೆಯ ತೊಟ್ಟಿಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನವಜಾತ ಶಿಶುಗಳನ್ನು ಕಸದ ತೊಟ್ಟಿ ಇತರ ತ್ಯಾಜ್ಯ ಪ್ರದೇಶದಲ್ಲಿ ಹಾಕುತ್ತಿರುವ ಬಗ್ಗೆ ಗಮನಕ್ಕಿದ್ದು, ಇದು ಅಪರಾಧ. ಬೇಡವಾದ ಮಗುವನ್ನು ಮಮತೆಯತೊಟ್ಟಿಲಲ್ಲಿ ಹಾಕಿದರೆ ಸಂಬಂಧಪಟ್ಟ ಇಲಾಖೆ ಆರೈಕೆ ಮಾಡಲಿದೆ.
ಈಗಾಗಲೇ ಆರೈಕೆಯಲ್ಲಿರುವ ಮಕ್ಕಳನ್ನು ದೇಶ, ವಿದೇಶಗಳಿಗೂ ದತ್ತು ನೀಡಲಾಗಿದ್ದು, ಮಕ್ಕಳಾಗದ ಪಾಲಕರಿಗೆ ವರದಾನವಾಗಲಿದೆ. ದೇಶದ ಮಕ್ಕಳನ್ನು ಅನ್ಯದೇಶದವರು ದತ್ತು ಪಡೆದು ಉತ್ತಮ ಭವಿಷ್ಯ ರೂಪಿಸುತ್ತಿದ್ದಾರೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ್ ಮಾತನಾಡಿ, ಬೇಡವಾದ ಮಕ್ಕಳ ಬೀದಿಪಾಲಾಗುವುದನ್ನು ತಪ್ಪಿಸಲು ಮಮತೆಯ ತೊಟ್ಟಿಲು ಯೋಜನೆ ರೂಪಿಸಲಾಗಿದ್ದು, ತೊಟ್ಟಿಲಲ್ಲಿ ಹಾಕಿದ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆರೈಕೆ ಮಾಡಲಿದೆ. ಭವಿಷ್ಯತ್ವದ ಮಕ್ಕಳನ್ನು ಎಲ್ಲೆಂದರಲ್ಲಿ ಬೀಸಾಡುವುದು ಸರಿಯಲ್ಲ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರಬಾರೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ನಗರ ಪಿಐ ಪ್ರಕಾಶ ಮಾಳೆ, ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡಗೌಡರ್, ಸಿಡಿಪಿಒ ಪ್ರವೀಣಕುಮಾರ ಹೇರೂರು, ವಕೀಲರ ಸಂಘದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಇತರರಿದ್ದರು.
ಕಂದಾಯ, ಶಿಕ್ಷಣ, ನಗರಸಭೆ, ಪೊಲೀಸ್, ಆರೋಗ್ಯ ಇಲಾಖೆ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.