ಅನಧಿಕೃತ ಪ್ರತಿಮೆ, ನಾಮಫಲಕಗಳ ಅನಾವರಣ, ಎಚ್ಚರಿಕೆ ನೀಡಿದ ಜಿಲ್ಲಾಡಳಿತ

IMG_20250731_154722.jpg
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿನ ಮಹನೀಯರ ಪುತ್ಥಳಿ ಇಲ್ಲವೇ ಪ್ರತಿಮೆಯನ್ನು ಪ್ರತಿಷ್ಠಾಪಿಸುವಾಗ ಕಡ್ಡಾಯವಾಗಿ ಸರ್ಕಾರದ ಮಾರ್ಗದರ್ಶಿ ನಿಯಮಗಳನ್ನು ಪಾಲಿಸಬೇಕು. ಸ್ಥಳೀಯ ಆಡಳಿತ ಸಂಸ್ಥೆಗಳ ಅನುಮತಿ ಇಲ್ಲದೇ ಸ್ಥಾಪಿಸುವಂತಿಲ್ಲ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಜಿಲ್ಲೆಯ ಸಾರ್ವಜನಿಕ ಸ್ಥಳ ಸೇರಿದಂತೆ ಹಲವೆಡೆ ದೇಶ ಸೇವೆಗೆ ಶ್ರಮಿಸಿದ ಮಹನೀಯರ ನಾಮಫಲಕಗಳನ್ನು, ಪ್ರತಿಮೆಗಳನ್ನು ಹಾಗೂ ಪುತ್ಥಳಿಗಳನ್ನು ಅನಧಿಕೃತವಾಗಿ ಪ್ರತಿಷ್ಠಾಪಿಸಲಾಗುತ್ತಿದೆ. ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಪುನೀತ್‌ ರಾಜ್‌ ಕುಮಾರ್‌, ಗುಡಿಬಂಡೆಯಲ್ಲಿ ಕೆಂಪೇಗೌಡ ಹಾಗೂ ಕೃಷ್ಣದೇವರಾಯ ಪ್ರತಿಮೆ ಸ್ಥಾಪನೆ ವಿಚಾರವಾಗಿ ವಿವಾದಗಳು ಸೃಷ್ಟಿಯಾಗಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಕೈಗೊಂಡಿದ್ದ ‘ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ನಿರ್ಮಾಣದ ನಿರ್ವಹಣೆಯ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ನಿಯಮ ಉಲ್ಲಂಘನೆಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲು ಆಯಾ ವ್ಯಾಪ್ತಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೇ ವೇಳೆ ಜಿಲ್ಲೆಯಲ್ಲಿನ ಯಾವುದೇ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳ ಆವರಣದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಅನುಮತಿ ಪಡೆಯದೆ ಮಹನೀಯರ ಪುತ್ಥಳಿ ಹಾಗೂ ಪ್ರತಿಮೆಗಳನ್ನು ಸ್ಥಾಪಿಸಲು ಸಾರ್ವಜನಿಕರಿಗೂ ಮನವಿ ಮಾಡಲಾಗಿದೆ.
ಕಾನೂನು ಬಾಹಿರವಾಗಿ ಪುತ್ಥಳಿ ಸ್ಥಾಪನೆ, ನಾಮಫಲಕ ಹಾಕಿ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ರೀತಿ ಯಾವುದೇ ವ್ಯಕ್ತಿಗಳು, ಸಂಘ ಸಂಸ್ಥೆಗಳು ನಡೆದು ಕೊಳ್ಳಬಾರದು. ಒಂದು ವೇಳೆ ಅಧೀನದ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೆ ಬಯಸಿದ್ದಲ್ಲಿ ಮೊದಲು ನಿಯಮಾನುಸಾರ ಅನುಮತಿ ಪಡೆಯುವುದು ಕಡ್ಡಾಯ ಎಂದು ಡಿಸಿ ಪಿ.ಎನ್‌.ರವೀಂದ್ರ ತಿಳಿಸಿದ್ದಾರೆ.
ಸಭೆಯಲ್ಲಿ ಜಿ.ಪಂ.ಸಿಇಒ ಡಾ. ವೈ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್ ಮತ್ತಿತರರು ಇದ್ದರು.

*ಮಾರ್ಗಸೂಚಿ ನಿಯಮ ಪಾಲನೆ
ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ (ಸಿ.ಎಸ್.ಆರ್) ಯಾವುದೇ ಖಾಸಗಿ ಸಂಸ್ಥೆಗಳು ಸಹ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುವ ಮೊದಲು ಸರ್ಕಾರದ ಮಾರ್ಗಸೂಚಿ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿಸ್ತೃತ ಯೋಜನಾ ವರದಿಗಳ (ಡಿಪಿಆರ್)ನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ ಅನುಮತಿ ಪಡೆದ ಬಳಿಕ ಕಾರ್ಯೋನ್ಮುಖರಾಗಲು ಜಿಲ್ಲಾಡಳಿತ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net