

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ವಿದ್ಯಾಗಿರಿಯಲ್ಲಿ ಆರಂಭವಾದ ಜನತಾ ಶಿಕ್ಷಣ ಸಮಿತಿ ಶೈಕ್ಷಣಿಕ ಕ್ಷೇತ್ರದಲ್ಲಿ ಬೃಹತ್ತಾಗಿ ಬೆಳೆದಿದ್ದು, ಇದೀಗ ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. ಈ ಮಹೋತ್ಸವ ನಿಮಿತ್ತ ಜೆಎಸ್‌ಎಸ್ ಆವರಣದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ವಸ್ತು ಪ್ರದರ್ಶನ ಜನಮನ ಸೆಳೆಯುತ್ತಿದೆ.
ನಗರದ ಬಹುತೇಕರಿಗೆ ಸಂಸ್ಥೆ ಬೆಳೆದು ಬಂದ ಹಾದಿ ಹಾಗೂ ಎದುರಿಸಿದ ಸವಾಲುಗಳ ಬಗ್ಗೆ ಮಾಹಿತಿ ಇಲ್ಲ. ಅಂತಹವರು ಈ ಪ್ರದರ್ಶನ ವೀಕ್ಷಿಸಿದರೆ ಸಾಕು. ಸಂಸ್ಥೆಯ ಸಮಗ್ರ ಚಿತ್ರಣ ಸಿಗಲಿದೆ. ನೂತನ ಆಡಳಿತ ಮಂಡಳಿ ಹಸ್ತಾಂತರ ಮಾಡಿಕೊಂಡ ದಿನದಿಂದ ಈವರೆಗೆ ಯಾವ ರೀತಿ ಬೆಳೆದು ಬಂದಿದೆ ಎಂಬ ಮಾಹಿತಿ ತಿಳಿಸುವ ಕೆಲಸ ಮಾಡಲಾಗುತ್ತಿದೆ.
ಈ ಪ್ರದರ್ಶನದಲ್ಲಿ ಇಡೀ ಜೆಎಸ್‌ಎಸ್ ಕ್ಯಾಂಪಸ್ ಮಾದರಿ ನಿರ್ಮಾಣದ ಜತೆಗೆ ಸಂಸ್ಥೆ ನಡೆಸಿದ ಸಾಮಾಜಿಕ ಕಾರ್ಯಗಳು, ಸಂಸ್ಥೆ ಸೌಲಭ್ಯ ಸೇರಿ ಯಾವ ರೀತಿ ಬೆಳೆದು ಬಂದಿದೆ ಎಂಬುದನ್ನು ಚಿತ್ರಗಳ ಸಮೇತ ಪ್ರದರ್ಶಿಸಲಾಗಿದೆ. ಈ ವಸ್ತು ಪ್ರದರ್ಶನವನ್ನು ಹೇಮಾವತಿ ಹೆಗ್ಗಡೆ ಉದ್ಘಾಟಿಸಿದರು.