

ಚಿತ್ರದುರ್ಗ: ಚೆಂದದ ರೇಷ್ಮೆ ಸೀರೆಯುಟ್ಟು ಅಲಂಕೃತರಾಗಿದ್ದ ಯುವತಿಯರು, ಮಕ್ಕಳು ವೇದಿಕೆ ಏರಿದರು. ಇಡೀ ಪ್ರೇಕ್ಷಕರ ಗ್ಯಾಲರಿ ಮೌನಕ್ಕೆ ಜಾರಿತು. ಕಲಾ ಸರಸ್ವತಿಯನ್ನು ಅವಾಹನೆ ಮಾಡಿಕೊಂಡ ನಾಟ್ಯ ಪ್ರವೀಣೆಯರು ವೈವಿಧ್ಯಮಯ ನೃತ್ಯ ಪ್ರದರ್ಶನ ನೀಡಲು ಮುಂದಾದರು. ಪ್ರತಿ ನೃತ್ಯವೂ ಪ್ರೇಕ್ಷಕರನ್ನು ಮನಸೂರೆಗೊಳಿಸಿತು...
ಅಂಜನಾ ನೃತ್ಯ ಕಲಾಕೇಂದ್ರದ 38ನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಕೇಂದ್ರದಿಂದ ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ನೃತ್ಯಾರಾಧನೆಗೆ ವೀಕ್ಷಕರಿಂದ ಕರತಾಡನ ವ್ಯಕ್ತವಾಯಿತು.
ಹೆಜ್ಜೆ-ಗೆಜ್ಜೆ ಸಮ್ಮಿಲನಗೊಂಡು ಸದ್ದು ಮಾಡಲಾರಂಭಿಸಿತು. ಕಲಾವಿದರ ಆವ-ಭಾವ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿ, ಒಂದೆರಡು ತಾಸು ನಾಟ್ಯ ಲೋಕಕ್ಕೆ ಕರೆದೊಯ್ದ ಅನುಭವ ಉಂಟಾಯಿತು. ಕೊಳಲಿನ ನಾದ, ಸಂಗೀತಕ್ಕೆ ತಕ್ಕಂತೆ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.
ಖುಷಿಸಿರಿ ತಂಡದಿಂದ ಶಾಸ್ತ್ರೀಯ, ರಚನಾ ತಂಡದಿಂದ ವಚನ, ಸುಪ್ರಿಯಾ ತಂಡದಿಂದ ಜನಪದ, ರಕ್ಷಿತಾ ತಂಡದಿಂದ ವೈವಿಧ್ಯಮಯ ನೃತ್ಯ ಪ್ರದರ್ಶನಗೊಂಡವು. ಸನ್ಮಾನಿತರಾದ ಕೊಳಲು ವಾದಕ ಗುರುರಾಜ್, ಸಂಗೀತ ಕಲಾವಿದ ಗಂಗಾಧರ್ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಚ್.ಮಲ್ಲಿಕಾರ್ಜುನಯ್ಯ ಉದ್ಘಾಟಿಸಿದರು. ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಕೆ.ರಾಜೀವಲೋಚನ, ನಾಟ್ಯರಂಜನಿ ಕಲಾಕೇಂದ್ರದ ವಿದ್ವಾನ್ ಜಿ.ಕಿರಣ್ ಅಂಜನಾ ನೃತ್ಯ ಕಲಾಕೇಂದ್ರದ ಪ್ರಾಂಶುಪಾಲ ಸಿ.ಆರ್.ಶಿವಪ್ರಕಾಶ್, ಡಾ.ನಂದಿನಿ ಶಿವಪ್ರಕಾಶ್ ಇತರರಿದ್ದರು.