ಪುನೀತ್ ರಾಜ್‌ಕುಮಾರ್ ಕಂಚಿನ ಪುತ್ಥಳಿ ಅನಾವರಣ

02 krp 01
Published on

ಕೆ.ಆರ್.ಪೇಟೆ: ಚಿತ್ರನಟ ದಿ.ಪುನೀತ್ ರಾಜ್‌ಕುಮಾರ್ ಅವರ ಕಂಚಿನ ಪುತ್ಥಳಿಯನ್ನು ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಅನಾವರಣಗೊಳಿಸಿದರು.

ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರನ್ನು ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಟಿ.ಬಿ.ಸರ್ಕಲ್‌ನಲ್ಲಿ ಪುನೀತ್ ಯುವ ಸಾಮ್ರಾಜ್ಯ ವತಿಯಿಂದ ನಿರ್ಮಿಸಲಾಗಿದ್ದ ಪ್ರತಿಮೆ ಸ್ಥಳಕ್ಕೆ ಕರೆತರಲಾಯಿತು. ಅಭಿಮಾನಿಗಳು ಅಶ್ವಿನಿ ಅವರಿಗೆ ಹೂಮಳೆಗರೆದರು. ಪುನೀತ್ ರಾಜ್‌ಕುಮಾರ್ ಅವರ ಕಂಚಿನ ಪುತ್ಥಳಿಯನ್ನು ಉದ್ಘಾಟಿಸಿದ ಅವರು ಪ್ರತಿಮೆಯನ್ನು ನೋಡಿ ಮನಸೋತರಲ್ಲದೆ, ಅವರ ಕಣ್ಣಂಚು ತೇವಗೊಂಡಿತು. ನಂತರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.

ಈ ವೇಳೆ ನೆರೆದಿದ್ದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಪ್ಪು, ಅಪ್ಪು ಎಂದು ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ, ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸೈ ಸ್ಕೂಲ್ ಆಫ್ ಡಾನ್ಸ್ ಮಕ್ಕಳು ಅಪ್ಪು ಚಿತ್ರದ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಕನ್ನಡ ನಾಡು ಕಂಡ ಹೃದಯ ಶ್ರೀಮಂತಿಕೆಯ ಅಪರೂಪದ ವ್ಯಕ್ತಿತ್ವದ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವು ಇಡೀ ಕನ್ನಡ ಚಿತ್ರರಂಗವಲ್ಲದೆ, ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಬದುಕಿದ್ದಾಗ ಸಾರ್ಥಕ ಜೀವನ ನಡೆಸುವ ಮೂಲಕ ಸಾವಿರಾರು ಮಕ್ಕಳಿಗೆ, ವೃದ್ಧರು, ಅನಾಥರಿಗೆ ದಾರಿದೀಪವಾಗಿದ್ದರು. ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಅವರಿಗೆ ಅಪ್ಪ ಡಾ.ರಾಜ್‌ಕುಮಾರ್ ಅವರಿಂದ ಹಲವಾರು ಉತ್ತಮ ಗುಣಗಳು ಬಂದಿದ್ದವು. ಎಷ್ಟೇ ವರ್ಷ ಕಳೆದರೂ ಕನ್ನಡಿಗರ ಮನೆ, ಮನಸ್ಸಿನಿಂದ ಅವರು ದೂರವಾಗುವುದಿಲ್ಲ ಎಂದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕಿರುತೆರೆ ಹಾಸ್ಯಕಲಾವಿದ ಶಿವರಾಜ್, ಕೋಳಿಕಳ್ಳ ಮನೋಹರ್, ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್, ಜಿಲ್ಲಾಧ್ಯಕ್ಷ ಯೋಗಣ್ಣ, ಕಾಂಗ್ರೆಸ್ ಮುಖಂಡ ವಿಜಯ್‌ರಾಮೇಗೌಡ, ಜಯಕರ್ನಾಟಕ ಸಂಘಟನೆ ಯುವ ಘಟಕದ ಅಧ್ಯಕ್ಷ ಮಹೇಶ್. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಹರೀಶ್, ಬೇಕರಿ ಹರೀಶ್, ಯೋಗೇಶ್, ದಿಲೀಪ್, ರಾಘು, ಪ್ರವೀಣ್, ಲೋಹಿತ್, ಎಂ.ಸಿ.ಜಗ, ದೇವರಾಜು, ಮಂಜು, ದಿನಿ, ಹರ್ಷ, ಸತೀಶ್ ಸೇರಿದಂತೆ ಸಾವಿರಾರು ಅಭಿಮಾನಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net