

ವಿರಾಜಪೇಟೆ: ಶಾಲಾ ವಿದ್ಯಾರ್ಥಿಗಳು, ಮಕ್ಕಳ ಹಕ್ಕುಗಳ ಪರಿಪಾಲನೆ ಮತ್ತು ಅನುಷ್ಠಾನ, ಮಕ್ಕಳ ಸಮಸ್ಯೆಗಳನ್ನು ಆಲಿಸಲು ಗುರುವಾರ ಮಕ್ಕಳ ಗ್ರಾಮ ಸಭೆ ಆಯೋಜಿಸಲಾಗಿತ್ತು.
ಕೊಡಗು ಜಿಲ್ಲಾ ಪಂಚಾಯಿತಿ, ವಿರಾಜಪೇಟೆ ತಾಲೂಕು ಪಂಚಾಯಿತಿ ಮತ್ತು ಆರ್ಜಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಮಕ್ಕಳ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿತ್ತು.
ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಬಾಣೆ ಗ್ರಾಮದಲ್ಲಿ ಆರೋಗ್ಯ ಕೇಂದ್ರದ ಅವಶ್ಯಕತೆ ಇದೆ. ಜತೆಗೆ ಶಾಲೆಯ ಮುಂಭಾಗ ಮುಖ್ಯ ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುತ್ತಿದೆ. ಇದರಿಂದ ನಮಗೆ ರಸ್ತೆ ದಾಟಲು ಆಗುತ್ತಿಲ್ಲ. ಅಲ್ಲಿ ನಾಮಫಲಕ ಹಾಗೂ ರೋಡ್ ಹಂಪ್ ಅಳವಡಿಸುವಂತೆ ನಸ್ರುತ್ ಉಲಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಬೇಡಿಕೆ ಇಟ್ಟ.
ಆರ್ಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಜೆ 5 ಗಂಟೆ ನಂತರ ಶಾಲಾ ಆವರಣಕ್ಕೆ ಕಿಡಿಗೇಡಿಗಳು ಬಂದು ಧೂಮಪಾನ, ಮದ್ಯಪಾನ ಮಾಡುತ್ತಿದ್ದಾರೆ. ಪೊಲೀಸರು ಇತ್ತ ಗಮನಿಸಬೇಕು ಎಂದು ಮತ್ತೊಬ್ಬ ವಿದ್ಯಾರ್ಥಿ ಮನವಿ ಮಾಡಿದ. ಪೆರುಂಬಾಡಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆ ಮುಂಭಾಗದ ತ್ಯಾಜ್ಯ ವಿಲೇವಾರಿ ಘಟಕದಿಂದ ನೊಣಗಳ ಕಾಟ ಶುರುವಾಗಿದೆ. ನಾವು ಸೇವಿಸುವ ಆಹಾರದ ಮೇಲೆ ನೊಟಗಳು ಕೂರುತ್ತಿವೆ. ಹಾಗಾಗಿ ಕಸ ವಿಲೇವಾರಿ ಘಟಕವನ್ನು ಬೇರೆ ಕಡೆಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು. ವಿದ್ಯಾರ್ಥಿಗಳು ಹೇಳಿದ ಸಮಸ್ಯೆಗೆ ಆಯಾ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಮಕ್ಕಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಒಟ್ಟು 15 ಅರ್ಜಿಗಳು ಸಲ್ಲಿಕೆಯಾದವು.
ನಗರ ಠಾಣೆಯ ಸಹಾಯಕ ಠಾಣಾಧಿಕಾರಿ ಎಂ.ಎಂ.ಮೊಹಮ್ಮದ್ ಮಾತನಾಡಿ, ಇತ್ತೀಚೆಗೆ ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವುದು ಅಪರಾಧ. ಚಿಕ್ಕ ವಯಸ್ಸಿನಲ್ಲೇ ವಾಹನ ಚಲಾಯಿಸುವುದು ಅಪರಾಧ ಇದರಿಂದ ದೊಡ್ಡ ಮೊತ್ತದ ದಂಡ ಪಾಲಕರು ಕಟ್ಟಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾ ರೆಜಿ, ಮಕ್ಕಳು ಮೊಬೈಲ್ ದಾಸರಾಗದೆ ಓದಿನತ್ತ ಗಮನ ಹರಿಸಬೇಕು. ಅಲ್ಲದೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಗ್ರಾಮಕ್ಕೆ ಕೀರ್ತಿ ಬರುವಂತೆ ಮಾಡಬೇಕು. ಮಕ್ಕಳು ನೀಡಿರುವ ಸಮಸ್ಯೆಗಳನ್ನ ಶೀಘ್ರದಲ್ಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ಕೆ.ಪ್ರಮೋದ್, ಸದಸ್ಯ ಕೆ.ಎನ್.ಉಪೇಂದ್ರ, ಕೆ.ಟಿ. ಬಶೀರ್, ಕೆ.ಕೆ.ಬೋಪಣ್ಣ, ಶಹಜೀರ್ ಆಲಿ ಉಪಸ್ಥಿತರಿದ್ದರು.