ಯಲಗಚ್ಚದಲ್ಲಿ ಪುನೀತ ರಾಜಕುಮಾರ ಪುತ್ಥಳಿ ಅನಾವರಣ

Punit Rajkumar Temple
Published on

ಗುತ್ತಲ: ಪುನೀತ ರಾಜ್​ಕುಮಾರ ಅವರು ಅತ್ಯಂತ ಚಿಕ್ಕ ವಯಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ತಂದೆಗೆ ತಕ್ಕ ಮಗನಂತೆ ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಛಾವು ಮೂಡಿಸಿದ್ದಾರೆ ಎಂದು ವಿಧಾನ ಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಸಮೀಪದ ಯಲಗಚ್ಚ ಗ್ರಾಮದಲ್ಲಿ ಗುರುವಾರ ಪುನೀತ್ ರಾಜ್​ಕುಮಾರ ಅವರ ಅಪ್ಪಟ ಅಭಿಮಾನಿ ಪ್ರಕಾಶ ಮರಬದ ಅವರು ನಿರ್ವಿುಸಿದ ದೇವಾಲಯ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುನೀತ್ ಅವರ ಅತ್ಯಂತ ಸರಳ ಸ್ವಭಾವ, ತಾಯಿ ಮಮತೆ, ಕರುಣೆಯ ಸ್ವಭಾವದವರಾಗಿದ್ದರು. ಅವರನ್ನು ಅನೇಕ ಬಾರಿ ಭೇಟಿಯಾಗಿದ್ದೆ. ನನ್ನ ಈ ಬೆಳವಣಿಗೆಗೆ ಡಾ.ರಾಜ್ ಅವರೇ ಸ್ಪೂರ್ತಿ, ಅವರ ನಟನೆಯ ಚಿತ್ರಗಳನ್ನು ನೋಡಿಯೇ ಬೆಳೆದಿರುವೆ ಎಂದರು. ಹಾವೇರಿಯಲ್ಲಿ ಪುನೀತ ರಾಜ್​ಕುಮಾರ ಹೆಸರನ್ನು ಬಸ್ ನಿಲ್ದಾಣ ಹಾಗೂ ಕೆಎಂಎಫ್​ಗೆ ಇಡುವ ಬಗ್ಗೆ ಸರ್ಕಾರದೊಂದಿಗೆ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಅಶ್ವಿನಿ ಅವರು ಪುನೀತ್ ರಾಜ್​ಕುಮಾರ ಅವರ ಅಭಿಮಾನಿ ಯಲಗಚ್ಚ ಗ್ರಾಮದ ಪ್ರಕಾಶ ಮರಬದ ಅವರ ಮನೆಯ ಆವರಣದಲ್ಲಿ ಪುನೀತ್ ರಾಜ್​ಕುಮಾರ ಪುತ್ಥಳಿ ಹಾಗೂ ದೇವಾಲಯ ಉದ್ಘಾಟಿಸಿದರು. ನಂತರ ಪ್ರಕಾಶ ಮರಬದ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮ ಸಂಯೋಜಕ ಸಂಜಯಗಾಂಧಿ ಸಂಜೀವಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೊಸರಿತ್ತಿ ಗುದ್ದಲಿಸ್ವಾಮಿ ಮಠದ ಗುದ್ದಲೀಶ್ವರ ಸ್ವಾಮಿಜಿ, ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣೆ, ತಾಪಂ ಮಾಜಿ ಅಧ್ಯಕ್ಷ ಎಂ.ಎಂ. ಮೈದೂರ, ದರ್ಶನ ಲಮಾಣಿ, ನಾಗರಾಜ ಕುಡಪಲಿ, ಪ್ರಕಾಶ ಮರಬದ, ಮಹದೇವಕ್ಕ ಮರಬದ, ಖುಷಿ ಮರಬದ, ಗ್ರಾಪಂ ಅಧ್ಯಕ್ಷ ಆನಂದ ಕುಂಬಾರಿ, ಸದಸ್ಯರಾದ ರವಿ ಮೆಣಸಿನಕಾಯಿ, ಇತರರಿದ್ದರು. ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ವಿವಿಧ ಕಲಾತಂಡಗಳಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ಸತೀಶ ಈಳಗೇರ, ಸುಭಾಷ ಪಾಟೀಲ ಹಾಗೂ ಗೀತಾ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.

ಹೋರಿಗಳೊಂದಿಗೆ ಅಶ್ವಿನಿ ಪುನೀತ್ ಪೋಟೋ

ಪುನೀತ ರಾಜ್​ಕುಮಾರ ಹೆಸರಿನ ಆನವಟ್ಟಿ ಪವರಸ್ಟಾರ್ 59 ಹಾಗೂ ಜೋಗಿ ಜಂಪಿಂಗ್ ಸ್ಟಾರ್ 333 ಎಂಬ ಹೋರಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದವು. ಹೋರಿಗಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಅಶ್ವಿನಿ ಅವರು ಎರಡು ಹೋರಿಗಳೊಂದಿಗೆ ಫೋಟೋ ತೆಗೆಸಿಕೊಂಡು ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net