ಭವ್ಯಭಾರತ ನಿರ್ಮಾಣಕ್ಕೆ ಕನಸುಗಳ ಅನಾವರಣ

12-02
ಹೊಸಕೋಟೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಗಣ್ಯರು ಬಹುಮಾನ ವಿತರಿಸಿದರು.
Published on

ಹೊಸಕೋಟೆ ಮೇದಶ್ರೀ ಒಲಂಪಿಯಾಡ್ ಶಾಲೆಯಲ್ಲಿ ಆಯೋಜನೆ - ವಿವೇಕಾನಂದ ಜಯಂತಿ ವಿಶೇಷ

ಹೊಸಕೋಟೆ: ವೀರಸನ್ಯಾಸಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ವಿಜಯವಾಣಿಯು ಮೇದಶ್ರೀ ಒಲಂಪಿಯಾಡ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ಕಾಲೇಜು ವಿದ್ಯಾರ್ಥಿನಿಯರು ವಿಶೇಷ ಆಸಕ್ತಿ ವಹಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಭವಿಷ್ಯ ಭಾರತ ನಿರ್ಮಾಣದಲ್ಲಿ ಯುವಜನರ ಪಾತ್ರವೇನು ಎಂಬ ಬಗ್ಗೆ ತಮ್ಮದೇ ಆದ ಕಲ್ಪನೆಯನ್ನು ಬರವಣಿಗೆ ಮೂಲಕ ಅನಾವರಣಗೊಳಿಸಿದರು.

ಸಾಮಾಜಿಕ ಮಾಧ್ಯಮಗಳು, ಕೃತಕ ಬುದ್ಧಿಮತ್ತೆ, ತಂತ್ರಜ್ಞಾನದ ಆವಿಷ್ಕಾರ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಯುವಜನರು ಹೇಗೆ ತೊಡಗಿಸಿಕೊಳ್ಳಬೇಕು, ಯಾವುದು ಒಳಿತು, ಯಾವುದು ತಪ್ಪು? ಇವೆಲ್ಲವುಗಳ ಸಂಗಮವಾಗಿ ಭವಿಷ್ಯದ ಭಾರತ ನಿರ್ಮಾಣದಲ್ಲಿ ಯುವಜನರು ವಹಿಸಬಹುದಾದಂತ ಮಹತ್ತರ ಪಾತ್ರದ ಬಗ್ಗೆ ವಿದ್ಯಾರ್ಥಿಗಳು ಪ್ರಬಂಧದ ರೂಪದಲ್ಲಿ ವಿಷಯಪಡಿಸಿದ್ದು ವಿಶೇಷವಾಗಿತ್ತು. ಸ್ಪರ್ಧೆಯಲ್ಲಿ ತಾಲೂಕಿನ ಆದಿತ್ಯ ಕಾಲೇಜಿನ ವಿದ್ಯಾರ್ಥಿನಿಯರೂ ಭಾಗವಹಿಸಿ ಉತ್ಸಾಹದಿಂದ ಪ್ರಬಂಧ ಬರೆದರು.

ಭ್ರಷ್ಟಾಚಾರ ನಿರ್ಮೂಲವಾಗಬೇಕು. ಜಾತಿ ಪದ್ಧತಿ, ಭ್ರಷ್ಟಾಚಾರ ನಿರ್ಮೂಲನೆ, ಕೋಮುವಾದ ತಡೆಗೆ ಯುವಕರು ಮುಂದಾಗಬೇಕು, ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು, ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳು ನಿಖರವಾದ ಮಾಹಿತಿ ನೀಡಿ ಭಾರತದ ಅಭಿವೃದ್ದಿ ಬಗ್ಗೆ ಯೋಚನಾ ಮನೋಭಾವ ಬೀರಬೇಕು, ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಜಾತಿ ಧರ್ಮ ಲಿಂಗದ ತಾರತಮ್ಯವಿಲ್ಲದೆ ಸಮಾನತೆ ಸಾರಿ ಹಕ್ಕುಗಳ ಜತೆ ತಮ್ಮ ಕರ್ತ್ಯವ್ಯಗಳನ್ನು ಚಾಚೂ ತಪ್ಪದೆ ನಿರ್ವಹಿಸಲು ಯುವಸಮೂಹ ಮುಂದಾಗಬೇಕು ಎಂಬ ಬಗ್ಗೆ ಹಲವು ವಿದ್ಯಾರ್ಥಿಗಳು ಪ್ರಬಂಧದ ಮೂಲಕ ತಮ್ಮ ಭಾವನೆ ವ್ಯಕ್ತಪಡಿಸಿದರು.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಜತೆ ತಂತ್ರಜ್ಞಾನದಿಂದ ವಂಚನೆ ಭ್ರಷ್ಟಾಚಾರ ತಡೆಗೂ ಮುಂದಾಗಬೇಕು, ದೇಶದ ಬೆನ್ನೆಲುಬಾದ ರೈತರಿಗೆ ಸೈನಿಕರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಬಳಕೆ ಮಾಡಿಕೊಳ್ಳಬೇಕು ಎಂಬ ಸಲಹೆಗಳು ವ್ಯಕ್ತವಾದವು.

ಪಾಲಕರು ಮಕ್ಕಳನ್ನು ಕೇವಲ ವೈದ್ಯ, ಇಂಜಿನಿಯರ್, ರಾಜಕೀಯದಂತ ಕ್ಷೇತ್ರಗಳಿಗೆ ಒತ್ತು ನೀಡದೆ ತಮ್ಮ ಮಕ್ಕಳನ್ನು ರೈತರನ್ನಾಗಿಸಿ, ಸೈನಿಕನನ್ನಾಗಿ ದೇಶಕ್ಕೆ ಕೊಡುಗೆ ನೀಡುವ ಪ್ರಯತ್ನ ಮಾಡುವುದು ಒಳಿತು ಎಂಬ ಭಾವನೆ ವ್ಯಕ್ತವಾಯಿತು. ರಾಜಕಾರಣದಲ್ಲಿ ಸ್ವಾರ್ಥ, ಧರ್ಮಾಂಧತೆ ದ್ವೇಷಭಾವನೆ ತೊಲಗಬೇಕು, ಯುವಸಮೂಹ ಮೂಡನಂಬಿಕೆ ಕಂದಾಚಾರಗಳಿಂದ ಮುಕ್ತವಾಗಬೇಕು, ಇಂತಹ ವಿಚಾರಗಳಲ್ಲಿ ಅಗ್ರಗಣ್ಯರಾಗಿ ಸ್ಪೂರ್ತಿದಾಯಕರಾಗಿ ಸ್ವಾಮಿ ವಿವೇಕಾನಂದರ ಮಾತುಗಳನ್ನು ದೇಶದ ಪ್ರತಿ ಯುವಕರು ಪಾಲಿಸಬೇಕು ಆಗ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂಬ ಅಭಿಪ್ರಾಯಗಳನ್ನು ವಿದ್ಯಾರ್ಥಿಗಳು ಪ್ರಬಂಧದ ಮೂಲಕ ವ್ಯಕ್ತಪಡಿಸಿದರು.

ಸಾಧನೆ ಮಾಡಿ: ವಿದ್ಯಾಭ್ಯಾಸದ ಸಂದರ್ಭದಲ್ಲಿ ತಂತ್ರಜ್ಞಾನ ಬಳಸಿ ಹೆಚ್ಚು ಸಾಧನೆ ಮಾಡಿ ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು. ಆದರೆ ಮೊಬೈಲ್ ಬಳಕೆ ಹಾಗೂ ಟಿವಿ ವೀಕ್ಷಣೆ ವಿದ್ಯಾಭ್ಯಾಸ ಸಂದರ್ಭದಲ್ಲಿ ಸಂಪೂರ್ಣ ನಿಲ್ಲಿಸಬೇಕು ಹಾಗೂ ಭಾಷಾ ಪ್ರಯೋಗ ಸಂದರ್ಭದಲ್ಲಿ ವ್ಯಾಕರಣದ ಬಗ್ಗೆ ಗಮನ ನೀಡಬೇಕು ಎಂದರು. ನಗರಸಭೆ ಆರೋಗ್ಯ ಇಲಾಖೆಯ ಅಧಿಕಾರಿ ಶೋಭಾ ಮಾತನಾಡಿ ವಿದ್ಯಾರ್ಥಿಗಳು ಶುಚಿತ್ವದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಸ್ವಚ್ಚತಾ ಪ್ರದೇಶವಿದ್ದಲ್ಲಿ ಕಲಿಕೆಗೆ ಯಾವುದೇ ಅಡೆತಡೆ ಇರುವುದಿಲ್ಲ, ಜೀವನದಲ್ಲಿ ಸ್ವಚ್ಛತೆ ಪಾಲನೆ ಅತಿ ಅವಶ್ಯ ಎಂದರು. ಪ್ರತಿ ನಿತ್ಯ ಪಾಲಿಸಬೇಕಾದ ಸರಳ ಕಾನೂನುಗಳ ಬಗ್ಗೆ ಹಾಗೂ ಮಕ್ಕಳ ಕಾನೂನು ಹಕ್ಕುಗಳ ಬಗ್ಗೆ ವಕೀಲ ಮಹೇಶ್ ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.ವಿಜೇತರಿಗೆ ಬಹುಮಾನಹ: ಪ್ರಥಮ ಬಹುಮಾನವನ್ನು ಆದಿತ್ಯ ಕಾಲೇಜಿನ ಪದವಿ ವಿದ್ಯಾರ್ಥಿನಿ ಎನ್.ಮೋನಿಷಾ, ಎಚ್.ಎಸ್.ನಮಿತಾ ದ್ವಿತೀಯ ಹಾಗೂ ಬಿ.ಚೈತನ್ಯಾ ತೃತೀಯ ಸ್ಥಾನ ಪಡೆದರು.

ಸ್ವಾಮಿ ವಿವೇಕಾನಂದರು ಯುವಸಮೂಹದ ಪರವಾಗಿ ಹೆಚ್ಚು ಮಾತನಾಡಿದ್ದಾರೆ, ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಹುಮ್ಮಸ್ಸು ತುಂಬಿದ ಮೊದಲಿಗರು. ಯುವಕರು ಯಾವುದೇ ಕೆಲಸ ಮಾಡಲು ಹಿಂದೆ ಸರಿಯಬೇಡಿ, ಪ್ರಯತ್ನ ನಿಮ್ಮದು, ಯಶಸ್ಸು ದೊರೆತರೆ ಸ್ಫೂರ್ತಿ, ಸೋತರೆ ಮಾಡಿದ ಕೆಲಸದಲ್ಲಿ ತಪ್ಪು ಕಂಡು ಹಿಡಿದು ವಿಧಾನ ಬದಲಿಸಿಕೊಳ್ಳುವ ಅನುಭವ ದೊರೆಯಲಿದೆ ಎಂದಿದ್ದರು. ಕೆ.ಜಿ.ಸೌಂದರ್ಯ ಬಿಕಾಂ ವಿದ್ಯಾರ್ಥಿನಿ, ಆದಿತ್ಯ ಪದವಿ ಕಾಲೇಜು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net