

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಇಲ್ಲಿ ಮಕ್ಕಳ ಕೈಯಲ್ಲಿ ರಚನೆಯಾದ ಚಿತ್ರ ಬರೀ ಚಿತ್ರ ಮಾತ್ರವಲ್ಲ. ಅದರಲ್ಲೊಂದು ಅದ್ಭುತವಾದ ಭಾವವಿದೆ. ನಮ್ಮ ಸಂಸ್ಕೃತಿಯು ಇಂತಹ ಕಲೆಗಳ ಮೂಲಕ ಅನಾವರಣಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಪ್ರಾಂಶುಪಾಲ ಶರಣ ಕುಮಾರ್ ಹೇಳಿದರು.
ಕುಂದಾಪುರದ ಹಳೆ ಬಸ್ ನಿಲ್ದಾಣ ಬಳಿಯಲ್ಲಿರುವ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಕುಂದಾಪುರ ಭಾಗದ ಅವಿಸ್ಮರಣೀಯ ಸ್ಥಳ, ಸಂಸ್ಕೃತಿಯ ಪ್ರತೀಕವನ್ನು ಬಿಂಬಿಸುವ, ನೆಲದ ಸಾರ ಅಭಿವ್ಯಕ್ತಪಡಿಸುವ ‘ನಮ್ ಕುಂದಾಪ್ರ’ ತ್ರಿವರ್ಣ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಕಲಾವಿದ, ತ್ರಿವರ್ಣ ಕಲಾ ತರಗತಿಯ ಹರೀಶ್ ಸಾಗಾ ಪ್ರಸ್ತಾವಿಸಿ, 2010ರಿಂದ ಇಲ್ಲಿ ಕಲಾ ತರಗತಿ ನಡೆಸಿಕೊಂಡು ಬರಲಾಗುತ್ತಿದ್ದು, ಮಕ್ಕಳಲ್ಲಿ ಚಿತ್ರಕಲೆಯ ಅಭಿರುಚಿಯನ್ನು ಬೆಳೆಸುವ ಉದ್ದೇಶ ನಮ್ಮದು. ಈವರೆಗೆ 29 ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.
ಓಕ್ವುಡ್ ಇಂಡಿಯನ್ ಸ್ಕೂಲ್ನ ಜಂಟಿ ಅಧ್ಯಕ್ಷೆ ನೀತಾ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ತನುಶ್ರೀ ಸ್ವಾಗತಿಸಿದರು. ಕೃತಿ ಕೆ.ದೇವಾಡಿಗ ವಂದಿಸಿದರು. ಅಕ್ಷತಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಈ ಚಿತ್ರಕಲಾ ಪ್ರದರ್ಶನದಲ್ಲಿ ಕುಂದಾಪುರ, ಮಣಿಪಾಲ, ಆನ್ಲೈನ್ ತ್ರಿವರ್ಣ ಕಲಾ ತರಗತಿಯ 18 ವರ್ಷದೊಳಗಿನ(ಕಿರಿಯರ ವಿಭಾಗ) ಆಯ್ದ 30 ಕಲಾ ವಿದ್ಯಾರ್ಥಿಗಳೇ ಬಿಡಿಸಿರುವ ಇಲ್ಲಿನ ಪಂಚಗಂಗಾವಳಿ, ಥೀಂ ಪಾರ್ಕ್, ಕೋಟಿಲಿಂಗೇಶ್ವರ, ಕೋಡಿ ಬೀಚ್, ಮೀನುಗಾರಿಕೆ, ಕಾಂತಾರ, ಕುಂದೇಶ್ವರ, ಬ್ರಹ್ಮಲಿಂಗೇಶ್ವರ, ಕೊಲ್ಲೂರು ದೇಗುಲ ಹೀಗೆ ವಿವಿಧ ರೀತಿಯ 30 ಕಲಾಕೃತಿಗಳನ್ನು ಅನಾವರಣಗೊಳಿಸಲಾಗಿದ್ದು, ಆ.18ರವರೆಗೆ ಪ್ರದರ್ಶನ ನಡೆಯಲಿದೆ.