

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕರ್ನಾಟಕ ಸಂಭ್ರಮ-50ರ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಸ್ಥಾಪಿಸುವ ಮೂಲಕ ಈ ಸವಿನೆನಪನ್ನು ಶಾಶ್ವತವಾಗಿಡುವುದು ಯೋಜನೆಯ ಉದ್ದೇಶವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತಭವನದ ಆವರಣದಲ್ಲಿ ಕನ್ನಡದ ಮೊಟ್ಟಮೊದಲ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಬೇಲೂರು ತಾಲೂಕಿನ ಹಲ್ಮಿಡಿಯಲ್ಲಿ 1936ರಲ್ಲಿ ಪತ್ತೆಯಾದ ಶಾಸನವನ್ನು ಕನ್ನಡ ಲಿಪಿಯಲ್ಲಿ ಲಭ್ಯವಾದ ಮೊಟ್ಟ ಮೊದಲ ಶಾಸನವೆಂದು ಪರಿಗಣಿಸಲಾಗಿದೆ. 16 ಸಾಲುಗಳ ಬರಹ ಇದರಲ್ಲಿತ್ತು. ಇದು ಕ್ರಿ.ಶಕ 450ರ ಸುಮಾರಿನದ್ದು ಎಂದು ಅಂದಾಜಿಸಲಾಗಿದೆ. ಇದರ ಬಗ್ಗೆ ಸಾಕಷ್ಟು ಅಧ್ಯಯನ-ಅವಲೋಕನಗಳು ನಡೆದಿದೆ. ಹೀಗಾಗಿ ಈ ಶಿಲಾ ಶಾಸನದ ಮಹತ್ವವನ್ನು ಶಾಶ್ವತವಾಗಿ ಜನರ ನೆನಪಿನಲ್ಲಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಪ್ರತಿಕೃತಿ ಸ್ವರೂಪದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
ರಾಜಮನೆಗಳು ಆಳಿದ ನಾಡು: ಹೊಯ್ಸಳ, ಕದಂಬ, ಚಾಲುಕ್ಯರು ಆಳಿದ ತ್ಯಾಗದ ವೀರಗಾಥೆಯ ನಾಡು ನಮ್ಮದು, ಈ ಮಣ್ಣಿನಲ್ಲಿ ಪ್ರೀತಿಯಿದೆ ತ್ಯಾಗವಿದೆ, ಪರೋಪಕಾರ ಗುಣವಿದೆ, ಧೈರ್ಯ, ಸಾಹಸವಿದೆ, ಗೌರವವಿದೆ ಈ ನಾಡಿನಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು ಎಂದು ಸಚಿವರು ಹೇಳಿದರು. ಹಲ್ಮಿಡಿ ಶಾಸನ ನಮ್ಮ ಕನ್ನಡ ನಾಡಿನ ಭವ್ಯ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿಸಿಕೊಡುತ್ತದೆ, ಸಾವಿರಾರು ವರ್ಷದ ಇತಿಹಾಸವಿರುವ ನಮ್ಮ ಕನ್ನಡ ನಾಡಿನ ಬಗ್ಗೆ ನಮ್ಮ ಮುಂದಿನ ಪೀಳಿಗೆಗೂ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.
ನಾಡಿಗೆ ಹೆಮ್ಮೆ: ನಾಲ್ಕೂವರೆ ಅಡಿ ಎತ್ತರ, 2 ಅಡಿ ಅಗಲ, 6 ಇಂಚು ದಪ್ಪ ಹಾಗೂ 500 ಕೆಜಿ ಭಾರವಿರುವ ಈ ಪ್ರತಿಕ್ರಿಯಿ ನಮ್ಮ ನಾಡಿನ ಹೆಮ್ಮೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಕ್ತಿ ಕೇಂದ್ರವಾಗಿರುವ ಜಿಲ್ಲಾಡಳಿತಭವನದ ಆವರಣದಲ್ಲಿ ಈ ಶಾಸನ ಅನಾವರಣಗೊಂಡಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹೇಳಿದರು. ಹಲ್ಮಿಡಿ ಶಾಸನಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಉಸ್ತುವಾರಿ ಸಚಿವರು ಅನಾವರಣಗೊಳಿಸಿದರು. ಜಿಲ್ಲಾಡಳ ಸಿಬ್ಬಂದಿ ಕನ್ನಡ ನಾಡಗೀತೆ ಹಾಡುವ ಮೂಲಕ ಶಾಸನಕ್ಕೆ ಗೌರವ ಸಮರ್ಪಿಸಿದರು.