ಶಿಗ್ಗಾಂವಿಯಲ್ಲಿ ಯೋಧ ಚಂದ್ರ ಢವಗಿ ಪುತ್ಥಳಿ ಅನಾವರಣಗೊಳಿಸಿ

Appeal to tahasildar
Published on

ಶಿಗ್ಗಾಂವಿ: ತಾಲೂಕಿನ ಮುಗಳಿ ಗ್ರಾಮದ ಹುತಾತ್ಮಯೋಧ ಚಂದ್ರು ಢವಗಿ ಅವರ ಪುತ್ಥಳಿ ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಶುಕ್ರವಾರ ತಹಸೀಲ್ದಾರ್ ಶಿವಾನಂದ ಪಿ. ರಾಣೆಗೆ ಮನವಿ ಸಲ್ಲಿಸಲಾಯಿತು.

2002ರಲ್ಲಿ ವೆಲ್ಲಿಂಗ್ಟನ್ ಮದ್ರಾಸ್ ರೆಜಿಮೆಂಟ್ ಸೆಂಟರ್ ಮೂಲಕ ಸೇವೆ ಆರಂಭಿಸಿದ್ದ ಮುಗಳಿ ಗ್ರಾಮದ ಯೋಧ ಚಂದ್ರು ಢವಗಿ ಅವರು ಕೋಲ್ಕತ್ತದ ಡೆರಕಪುರ, ಜಮ್ಮು ಮತ್ತು ಕಾಶ್ಮೀರದ ಕುಪ್ಪಾಡ್, ಗುಜರಾತ್​ನ ಜಾಮ್ ನಗರ, ಅಸ್ಸಾಂನ ತೇಜಪುರ, ಆಂಧ್ರ ಪ್ರದೇಶದ ಹೈದರಾಬಾದ್​ನಲ್ಲಿ 14 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಕರ್ತವ್ಯದಲ್ಲಿರುವಾಗಲೇ 2018ರ ಫೆಬ್ರವರಿ 2ರಂದು ಅರುಣಾಚಲ ಪ್ರದೇಶದ ಪೆಂಗಾ ಎಂಬಲ್ಲಿ ಸಂಭವಿಸಿದ ಅವಘಡದಲ್ಲಿ ಚಂದ್ರು ಹುತಾತ್ಮರಾಗಿದ್ದರು.

ಅಂದು ಸರ್ಕಾರದಿಂದ ಯೋಧನ ಸಮಾಧಿ ಮಾಡಿದ ಜಾಗದಲ್ಲಿ ಚಂದ್ರು ಡವಗಿ ಅವರ ಪುತ್ಥಳಿ ಅನಾವರಣಗೊಳಿಸಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಸ್ಮಾರಕ ನಿರ್ವಣಗೊಂಡು ಹಲವು ವರ್ಷಗಳು ಕಳೆದರೂ ಪುತ್ಥಳಿ ಮಾತ್ರ ಅನಾವರಣಗೊಳ್ಳದಿರುವುದು ತಾಲೂಕು ಆಡಳಿತ ಮತ್ತು ಸ್ಥಳೀಯ ಶಾಸಕರ ವಿರುದ್ಧ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯೋಧನ ಪುತ್ಥಳಿ ಮುಗಳಿ ಗ್ರಾಮಕ್ಕೆ ಬಂದು ಎಂಟು ತಿಂಗಳು ಕಳೆದಿವೆ. ಯೋಧ ಹುತಾತ್ಮನಾಗಿ ಐದೂವರೆ ವರ್ಷ ಕಳೆದಿದ್ದು, ಯೋಧನಿಗೆ ಸಲ್ಲಬೇಕಿದ್ದ ಗೌರವ ಸಿಗದಿರುವುದು ಬೇಸರ ತರಿಸಿದೆ. ತಾಲೂಕು ಆಡಳಿತ ಮತ್ತು ಕ್ಷೇತ್ರದ ಶಾಸಕರು ಪುತ್ಥಳಿಯನ್ನು ಅನಾವರಣಗೊಳಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.

ಕೆಆರ್​ಎಸ್ ಪಕ್ಷದ ತಾಲೂಕು ಅಧ್ಯಕ್ಷ ಧರ್ಮರಾಜ ಬಿಂದಲಗಿ, ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಮುತ್ತಪ್ಪ ಗುಡಗೇರಿ, ಶಂಕರಗೌಡ ಪಾಟೀಲ, ರಮೇಶ ಗೊರವರ, ಶ್ರೀಕಾಂತ ಪೊಲೀಸಗೌಡ್ರ, ವಿರೂಪಾಕ್ಷ ಹೊಸಗೌಡ್ರ, ರವಿ ಹುಕ್ಕೇರಿ, ಖಾದರಭಾಷಾ ಸೇರಿದಂತೆ ಕೆಆರ್​ಎಸ್ ಪಕ್ಷದ ಹಾಗೂ ರೈತ ಸಂಘದ ಪಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net