

ಚಿಕ್ಕಮಗಳೂರು: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿದಾಗ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆ, ಸುಂದರಮ್ಮ ಶಂಕರಮೂರ್ತಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪಠ್ಯ-ಪಠ್ಯೇತರ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ವಿಭಿನ್ನ ರೀತಿಯ ಪ್ರತಿಭೆಗಳನ್ನು ಮಕ್ಕಳು ಹೊಂದಿರುತ್ತಾರೆ. ಕೆಲವರಿಗೆ ಅವಕಾಶ ಸಿಗದೆ ಪ್ರತಿಭೆ ಹೊರಹೊಮ್ಮಿಸಲು ಸಾಧ್ಯವಾಗದಿರಬಹುದು. ಆದರೆ ಸಿಕ್ಕಂಥ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಪ್ರತಿಭೆ ಅನಾವರಣಗೊಳಿಸಬೇಕು ಎಂದು ಸಲಹೆ ನೀಡಿದರು.
ಪೂರ್ವಜರು ಸಾಮಾನ್ಯ ಜ್ಞಾನದಿಂದಲೇ ಮಕ್ಕಳನ್ನು ಪೋಷಿಸಿ ವಿದ್ಯಾವಂತರನ್ನಾಗಿಸಿದ್ದಾರೆ. ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಚಂದ್ರಯಾನದ ಯಶಸ್ವಿ ವಿಶ್ವವೇ ಭಾರತದತ್ತ ಮುಖ ಮಾಡಿದೆ. ವಿದ್ಯಾರ್ಥೀಗಳು ಇಂಥ ವಿಷಯಗಳಲ್ಲಿ ಹೆಚ್ಚು ಆಸಕ್ತಿ ವಹಿಸಿ ಸಾಧನೆ ಮಾಡಬೇಕು ಎಂದು ಹೇಳಿದರು.
ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೇಶವಮೂರ್ತಿ, ಪಿಯು ಕಾಲೇಜಿನ ಪ್ರಾಚಾರ್ಯರಾದ ಎಂ.ಬಿ.ಜಯಶ್ರೀ, ಉಪಾಧ್ಯಕ್ಷೆ ರಾಧಾ ಸುಂದ್ರೇಶ್, ಸಹ ಕಾರ್ಯದರ್ಶಿ ಎಸ್.ಶಂಕರನಾರಾಯಣ ಭಟ್, ವ್ಯವಸ್ಥಾಪಕಿ ಲಕ್ಷ್ಮೀ ಇತರರಿದ್ದರು.