ಉಪಯೋಗಕ್ಕೆ ಬಾರದ ಶಕ್ತಿ ಯೋಜನೆ

Unutilized power plan
Published on

ಮಡಿಕೇರಿ:

ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಸೂಕ್ತ ರೀತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಇಲ್ಲ. ಖಾಸಗಿ ಬಸ್‌ಗಳೇ ಇಲ್ಲಿಯ ಜೀವನಾಡಿ. ಸರ್ಕಾರಿ ಬಸ್‌ಗಳ ಸಂಚಾರ ಇಲ್ಲದ ಕಾರಣ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಸಿಗುತ್ತಿಲ್ಲ. ವಿದ್ಯಾರ್ಥಿಗಳ ಪಾಸ್, ಪ್ರತಿನಿತ್ಯ ಓಡಾಡುವವರಿಗೆ ಕೊಡುವ ಪಾಸ್‌ಗಳ ಉಪಯೋಗವೂ ಸರಿಯಾಗಿ ಆಗುತ್ತಿಲ್ಲ.

ಸಂಸ್ಥೆಗೆ ಹೆಚ್ಚಿನ ಆದಾಯ ತಂದುಕೊಡುವ ಕುಶಾಲನಗರ-ಮಡಿಕೇರಿಯಂಥ ಪ್ರಮುಖ ಮಾರ್ಗಗಳಲ್ಲಿ ವೇಗದೂತ ಬಸ್‌ಗಳು ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಇಲ್ಲ. ಮೈಸೂರು, ಬೆಂಗಳೂರು ಅಥವಾ ಹಾಸನ ಕಡೆಯಿಂದ ಮಡಿಕೇರಿಗೆ ತೆರಳುವ ಬಸ್‌ಗಳಲ್ಲಿ ಸಂಚರಿಸಬೇಕಿದೆ. ಬೆಳಗ್ಗೆ ಶಾಲಾ, ಕಾಲೇಜು, ಕಚೇರಿಗೆ ತೆರಳುವ ಅವಧಿಯಲ್ಲಿ ಈ ಬಸ್‌ಗಳು ಕುಶಾಲನಗರಕ್ಕೆ ಬರುವಾಗಲೇ ಭರ್ತಿ ಆಗಿ ಬಂದಿರುತ್ತವೆ. ಹಾಗಾಗಿ ಈ ವೇಳೆಯಲ್ಲಿ ೩೨ ಕಿಮೀ ದೂರ ನಿಂತುಕೊಂಡೇ ಪ್ರಯಾಣಿಸುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ - ಕುಶಾಲನಗರ ಮಾರ್ಗಕ್ಕೆ ಸೀಮಿತವಾಗಿ ಸುಂಟಿಕೊಪ್ಪದಲ್ಲಿ ಒಂದು ನಿಲುಗಡೆ ಕೊಟ್ಟು ವೇಗದೂತ ಬಸ್‌ಗಳನ್ನು ಓಡಿಸುವ ಬೇಡಿಕೆಯೂ ಸಾರ್ವಜನಿಕರಿಂದ ಇದೆ.

ಎಲ್ಲಾ ಕೆಎಸ್‌ಆರ್‌ಟಿಸಿ ಮಾರ್ಗಗಳಂತೆ ಮಡಿಕೇರಿ ಡಿಪೋದಿಂದಲೂ ಕೊರೊನಾ ಕಾಲದಲ್ಲಿ ಕೆಲವು ಮಾರ್ಗಗಳು ಸ್ಥಗಿತಗೊಂಡಿದ್ದವು. ಮತ್ತೆ ಕೆಲವು ಮಾರ್ಗಗಳನ್ನು ಬೇರೆ ಡಿಪೋಗಳಿಗೆ ವರ್ಗಾಯಿಸಲಾಗಿತ್ತು. ಕೊರೊನಾ ಮುಗಿದ ನಂತರವೂ ಇದೇ ಸ್ಥಿತಿ ಮುಂದುವರಿದಿದ್ದು, ಶಾಲಾ-ಕಾಲೇಜು ಮಕ್ಕಳು, ಪ್ರತಿನಿತ ಸಂಚರಿಸುವ ಉದ್ಯೋಗಿಗಳು ಬಸ್‌ಪಾಸ್ ಮಾಡಿಸಿಕೊಂಡಿದ್ದರೂ ಖಾಸಗಿ ಬಸ್‌ಗಳಲ್ಲಿ ಓಡಾಡುವಂತಾಗಿದೆ.

ಜಿಲ್ಲೆಯಲ್ಲಿ ಒಟ್ಟು ೯೧ ಮಾರ್ಗಗಳಿದ್ದು, ಇವುಗಳಲ್ಲಿ ೪೧ ಎಕ್ಸ್‌ಪ್ರೆಸ್, ೩೧ ಸ್ಥಳೀಯ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ೭ ಬಸ್‌ಗಳು ಸಂಚಾರ ಇದೆ. ಆದರೆ ಮಧ್ಯಾಹ್ನ ೩.೧೫ರ ನಂತರ ಮಡಿಕೇರಿಯಿಂದ ಕೊಡ್ಲಿಪೇಟೆಗೆ ಯಾವುದೇ ಬಸ್ ಓಡುವುದಿಲ್ಲ. ಬೆಳಗ್ಗೆ ೭ ರ ನಂತರ ೯.೩೦ರವರೆಗೆ ಸೋಮವಾರಪೇಟೆಯಿಂದ ಮಡಿಕೇರಿಗೆ ಯಾವುದೇ ಬಸ್ ಇಲ್ಲ. ೧೦ ಗಂಟೆ ಕಳೆದರೆ ಮತ್ತೆ ಸಂಜೆ ೪.೩೦ರವರೆಗೆ ಯಾವುದೇ ಸರ್ಕಾರಿ ಬಸ್ ಸಂಚಾರ ಇಲ್ಲ. ಗೋಣಿಕೊಪ್ಪ, ಸಿದ್ದಾಪುರದಿಂದಲೂ ಮಡಿಕೇರಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಈ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.

ಶಾಂತಳ್ಳಿ ಹೋಬಳಿಯಲ್ಲಿ ಅನೇಕ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ರೈತರೇ ವಾಸವಾಗಿರುವಲ್ಲಿ ಈ ಭಾಗದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಪ್ರಯೋಜನಕ್ಕೆ ಬರುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ರಸ್ತೆಗಳನ್ನು ಸರಿಪಡಿಸಿ ಸರ್ಕಾರಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ನಾಗರತ್ನ ಕೊಮಾರಪ್ಪ, ಕೃಷಿಕ ಮಹಿಳೆ, ಕೂತಿ ಗ್ರಾಮ.

ಮಾದಾಪುರ, ಗರ್ವಾಲೆ, ಸೂರ್ಲಬ್ಬಿ ಮಾರ್ಗವಾಗಿ ಒಂದು ಸರ್ಕಾರಿ ಬಸ್ ಸಂಚರಿಸುತ್ತದೆ. ಇದರಿಂದ ರೈತರಿಗೆ, ಶಾಲಾ ಕಾಲೇಜು ಮಕ್ಕಳಿಗೆ ಪ್ರಯೋಜನವಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ, ಮೂರು ಬಸ್‌ಗಳು ಸಂಚಾರ ಮಾಡಬೇಕು. ೫೦೦, ಸಾವಿರ ಆಟೋ ಬಾಡಿಗೆ ಕೊಟ್ಟು ಮಾದಾಪುರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಉಚಿತ ಬಸ್ ಸಂಚಾರ ಯೋಜನೆ ನಿಜವಾದ ಫಲಾನುಭವಿಗಳಿಗೆ ಸಿಗಬೇಕು ಎಂದರೆ ಹೆಚ್ಚು ಬಸ್‌ಗಳ ಸಂಚಾರ ಬೇಕು.
ಚಾಮೇರ ಲಕ್ಷ್ಮಣ್, ಕೃಷಿಕ, ಮಂಕ್ಯಾ ಗ್ರಾಮ.

ಕೊಡಗು ಜಿಲ್ಲೆಯಲ್ಲಿ ಸಾರಿಗೆ ಬಸ್ ವ್ಯವಸ್ಥೆ ಸರಿ ಇಲ್ಲ. ಇದ್ದರೂ ಕೆಲಸಕ್ಕೆ ಹೋಗುವವರಿಗೆ ಸಮಯಕ್ಕೆ ಸರಿಯಾಗಿ ಬಸ್‌ಗಳು ಇಲ್ಲ. ಕುಶಾಲನಗರದಿಂದ ೮.೩೦ ರ ಹೊತ್ತಿಗೆ ವಿರಾಜಪೇಟೆ ಕಡೆಗೆ ಹೋಗಲು ಸರ್ಕಾರಿ ಸಾರಿಗೆ ಬಸ್ ಸಂಚಾರ ಆರಂಭಿಸಿದರೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಫಲ ಇಲ್ಲಿಯ ಮಹಿಳೆಯರಿಗೂ ದೊರೆಯುತ್ತೆ. ಆದ?್ಟು ಬೇಗ ಈ ಮಾರ್ಗದಲ್ಲಿ ಕೆ. ಎಸ್. ಆರ್. ಟಿ. ಸಿ. ಬಸ್ ಬಂದರೆ ಒಳ್ಳೆಯದು.
ಸಜಿನಿ ಚಂದ್ರು, ಶಿಕ್ಷಕಿ, ಮಾಲ್ದಾರೆ

ಪ್ರತಿ ದಿನ ಕಾಲೇಜಿಗೆ ಯಾವುದಾದರೂ ಸಿಕ್ಕಿದ ಬಸ್‌ನಲ್ಲಿ ಹೋಗುತ್ತಿದ್ದೆ. ಆದರೆ ಶಕ್ತಿ ಯೋಜನೆ ಜಾರಿಯಾದ ಮೇಲೆ ಸಮಯ ಬದಲಾಯಿಸಿ ಸರ್ಕಾರಿ ಬಸ್‌ನಲ್ಲೇ ಹೋಗುತ್ತಿದ್ದೇನೆ. ಆದರೆ ಕೆಲವೊಮ್ಮೆ ಎಲ್ಲಾ ಸಮಯದಲ್ಲಿಯೂ ಬಸ್ ವ್ಯವಸ್ಥೆ ಇರುವುದಿಲ್ಲ. ಒಂದೋ ಬಸ್ ಸಮಯಕ್ಕೆ ಕಾಯಬೇಕು ಇಲ್ಲ ಖಾಸಗಿ ಬಸ್ ಅವಲಂಬಿಸಬೇಕು. ಹಾಗಾಗಿ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಿಸಿದರೆ ಒಳ್ಳೆಯದು.
ಜಶ್ಮಿ ಕೆ. ಎ., ಗೋಣಿಕೊಪ್ಪ

ಕೊಡಗಿನಲ್ಲಿ ಮೊದಲಿನಿಂದಲೂ ಹಳ್ಳಿ ಹಳ್ಳಿಗಳನ್ನು ತಲುಪಿದ್ದು ಖಾಸಗಿ ಬಸ್‌ಗಳು. ಇತ್ತೀಚಿನ ದಿನಗಳಲ್ಲಿ ಕಾರಣಾಂತರಗಳಿಂದ ಖಾಸಗಿ ಬಸ್‌ಗಳು ಹಳ್ಳಿ ದಾರಿಯಿಂದ ದೂರ ಸರಿಯುತ್ತಿದೆ. ಅಂತಹ ಸಂದರ್ಭದಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಿದರೆ, ಪ್ರತಿದಿನ ಓಡಾಡುವವರಿಗೆ ಅನುಕೂಲವಾಗುತ್ತದೆ. ಈಗಂತೂ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ ಅನುಕೂಲವಾಗುತ್ತಿದೆ.
ನಾಟೋಳಂಡ ಗಿರೀಶ್, ಗೋಣಿಕೊಪ್ಪ

ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಸರಿಯಿಲ್ಲ. ಇರುವ ಬಸ್‌ಗಳು ಸಮಯಕ್ಕೆ ಸರಿಯಾಗಿ ಸಂಚರಿಸುವುದಿಲ್ಲ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಮಾತ್ರವಲ್ಲದೆ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕಿತ್ತು. ಇದರಿಂದ ಸರ್ಕಾರದ ಈ ಯೋಜನೆ ಹೆಚ್ಚು ಅರ್ಥಪೂರ್ಣ ಆಗಿರುತ್ತಿತ್ತು.
ತೆಕ್ಕಡೆ ಶೋಭಾ ಮೋಹನ್, ಮಾಜಿ ಅಧ್ಯಕ್ಷೆ, ತಾಲೂಕು ಪಂಚಾಯಿತಿ, ಮಡಿಕೇರಿ

ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಸೂಕ್ತ ರೀತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಇಲ್ಲ. ಖಾಸಗಿ ಬಸ್‌ಗಳೇ ಇಲ್ಲಿಯ ಜೀವನಾಡಿ. ಸರ್ಕಾರಿ ಬಸ್‌ಗಳ ಸಂಚಾರ ಇಲ್ಲದ ಕಾರಣ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಸಿಗುತ್ತಿಲ್ಲ. ನಾನು ವಿದ್ಯಾರ್ಥಿ ಪಾಸ್ ಮಾಡಿಸಿದ್ದೆ ಆದರೆ ಅದರ ಉಪಯೋಗ ಶೂನ್ಯ. ಇನ್ನಾದರೂ ಜಿಲ್ಲೆಯ ಭಾಗಗಳಿಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಲಿ
ಪ್ರೀತಮ್ ಪೂಜಾರಿ, ವಿದ್ಯಾರ್ಥಿ, ಕಿರಗಂದೂರು

ಮಾಲ್ದಾರೆ ಸರ್ಕಾರಿ ಶಾಲೆಯಲ್ಲಿ ೧ರಿಂದ ೧೦ನೇ ತರಗತಿ ತನಕ ಸುಮಾರು ೩೦೦ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಗುಣಮಟ್ಟದ ಬೋಧನೆ ಹೊಂದಿರುವ ಶಾಲೆ ಫಲಿತಾಂಶದಲ್ಲೂ ಸಾಧನೆ ತೋರಿದೆ. ಆದರೆ, ಪಿರಿಯಾಪಟ್ಟಣ ತಾಲೂಕಿನ ಮುತ್ತೂರು, ಲಿಂಗಪುರ ಸೇರಿ ಇತರ ಗ್ರಾಮಗಳಿಂದ ಬರುವ ಮಕ್ಕಳಿಗೆ ದಿನನಿತ್ಯ ಬಸ್‌ಗಾಗಿ ಕಾಯುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಿರಿಯಾಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಇದೆ. ಮಾಲ್ದಾರೆಯಿಂದ ಸುಮಾರು ೨೫ ಕಿಮೀ ದೂರವಿದ್ದರೂ ಹೆಚ್ಚಿನ ಬಸ್ ವ್ಯವಸ್ಥೆ ಇಲ್ಲ.
ಭಾವ ಮಾಲ್ದಾರೆ, ಅಧ್ಯಕ್ಷ, ಜನಪರ ಸಂಘಟನೆ

ಕಳೆದ ೫ ವರ್ಷಗಳಿಂದ ಹೊಸ ಬಸ್‌ಗಳು ಬಂದಿರಲಿಲ್ಲ. ಈ ವರ್ಷ ೪ ಸಾಮಾನ್ಯ ಮತ್ತು ೪ ಪಲ್ಲಕ್ಕಿ ಉತ್ಸವ ಬಸ್‌ಗಳಿ ನಮ್ಮ ವಿಭಾಗಕ್ಕೆ ಮಂಜೂರಾಗಿವೆ. ಹೊಸ ಮಾರ್ಗಗಳಿಗೆ ಪ್ರಯಾಣಿಕರಿಂದ ಬೇಡಿಕೆಗಳು ಬರುತ್ತಿದೆ. ಬಸ್ ಮತ್ತು ಸಿಬ್ಬಂದಿ ವ್ಯವಸ್ಥೆ ಆದ ಕೂಡಲೇ ಬೇಡಿಕೆ ಇರುವ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಲು ಕ್ರಮ ತೆಗೆದುಕೊಳ್ಳಲಾಗುವುದು.
ಕೆ.ಎಸ್. ನಂದಕುಮಾರ್, ಡಿವಿಜನಲ್ ಮೆಕ್ಯಾನಿಕಲ್ ಎಂಜಿನಿಯರ್, ಕೆಎಸ್‌ಆರ್‌ಟಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net