

ನಂಜನಗೂಡು: ಗ್ರಾಮೀಣ ಜನರಿಗೆ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡಿ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಿದ್ದರೂ ಹಲವೆಡೆ ಟ್ಯಾಂಕ್‌ಗಳಿಗೆ ನೀರು ತುಂಬಿಸಿಲ್ಲ!
ಇದಕ್ಕೆ ಸ್ಪಷ್ಟ ಉದಾಹರಣೆ ತಾಲೂಕಿನ ಹೆಡತಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗಾರಿಪುರ ಗ್ರಾಮ. 2021ರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ 50,000 ಲೀಟರ್ ಸಾಮರ್ಥ್ಯದ ನೀರು ಸರಬರಾಜು ಟ್ಯಾಂಕನ್ನು ಗ್ರಾಮದಲ್ಲಿ ನಿರ್ಮಿಸಲಾಯಿತು. ಆದರೆ ಇದುವರೆಗೂ ಒಂದೇ ಒಂದು ಹನಿ ನೀರನ್ನು ಟ್ಯಾಂಕ್ ಕಂಡಿಲ್ಲ. ಪರಿಣಾಮ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಓವರ್‌ಹೆಡ್ ಟ್ಯಾಂಕ್ ನಿರುಪಯುಕ್ತವಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನಿರ್ಮಲ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಟ್ಯಾಂಕ್ ನಿರ್ಮಾಣ ಮಾಡಿ ಹೆಡತಲೆ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿತು. ಈಗಾಗಲೇ ಗ್ರಾಮದಲ್ಲಿ ಮತ್ತೊಂದು ಟ್ಯಾಂಕ್ ಇದ್ದರೂ ಈ ಟ್ಯಾಂಕನ್ನು ಹೊಸದಾಗಿ ನಿರ್ಮಾಣ ಮಾಡಿದ್ದಾದರೂ ಯಾಕೆ? ನಿರ್ಮಾಣ ಮಾಡಿದ ನಂತರ ಯಾಕೆ ನೀರು ತುಂಬಿಸುತ್ತಿಲ್ಲ ಎನ್ನುವುದು ಈಗ ಯಕ್ಷಪ್ರಶ್ನೆಯಾಗಿದ್ದು, ಸಂಬಂಧಪಟ್ಟವರೇ ಇದಕ್ಕೆ ಉತ್ತರ ನೀಡಬೇಕಿದೆ.
ಕುಡಿಯುವ ನೀರಿನ ಸಮಸ್ಯೆ: ಗ್ರಾಮದಲ್ಲಿ ಸುಮಾರು 600 ಜನಸಂಖ್ಯೆ ಇದ್ದು, ಬೋರ್‌ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ಪ್ರಸ್ತುತ ಬೇಸಿಗೆ ಪ್ರಾರಂಭಗೊಂಡಿದ್ದು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದು ಗ್ರಾಮಸ್ಥರ ಅಳಲು. ಈ ನಡುವೆ ಬೋರ್‌ವೆಲ್ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವ ಕಾರಣ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಗ್ರಾಮದ ಕೂಗಳತೆ ದೂರದಲ್ಲಿರುವ ಮಹದೇವನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ಸುಮಾರು ವರ್ಷಗಳೇ ಕಳಿದಿವೆ. ಈ ನಡುವೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕನ್ನೂ ಸ್ಥಾಪಿಸಿಲ್ಲ. ಪರಿಣಾಮ ಇಲ್ಲಿನ ಜನ ಶುದ್ಧ ನೀರು ತರುವುದಕ್ಕಾಗಿ ಕಿಲೋಮೀಟರ್‌ಗಟ್ಟಲೇ ಹೋಗಬೇಕಿದೆ ಎಂಬುದು ಸ್ಥಳೀಯರ ಅಳಲು.
ನಾಲ್ಕು ವರ್ಷಗಳಿಂದ ನಿರುಪಯುಕ್ತವಾಗಿರುವ ಓವರ್‌ಹೆಡ್ ಟ್ಯಾಂಕ್ ಅನ್ನು ಬಳಕೆ ಮಾಡಿಕೊಳ್ಳುವ ಮೂಲಕ ಹೆಡತಲೆ ಗ್ರಾಮ ಪಂಚಾಯಿತಿ ಸ್ಥಳೀಯರಿಗೆ ನೀರು ಒದಗಿಸಬೇಕು. ಇದು ಸಾಧ್ಯವಾಗಬೇಕಾದರೆ ಪಂಚಾಯಿತಿಯ ಆಡಳಿತ ಮಂಡಳಿ ಹೆಚ್ಚಿನ ಮುತುವರ್ಜಿ ವಹಿಸಿ ಮತ್ತೊಂದು ಬೋರ್‌ವೆಲ್ ಕೊರೆಸಿ ಟ್ಯಾಂಕ್ ತುಂಬಿಸುವ ಕೆಲಸ ಮಾಡಬೇಕು. ಸರ್ಕಾರ ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಓವರ್ ಹೆಡ್ ಟ್ಯಾಂಕ್ ಅನ್ನು ಹೀಗೆ ಬಿಟ್ಟರೆ ಕೆಲವೇ ದಿನಗಳಲ್ಲಿ ಕುಸಿದು ವ್ಯರ್ಥವಾಗುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಟ್ಯಾಂಕ್ ಉಳಿಸಬೇಕು ಎಂದು ಗ್ರಾಮಸ್ಥರ ಆಗ್ರಹ.
ಗ್ರಾಮಕ್ಕೆ ನೀರು ಪೂರೈಸುವ ಸಲುವಾಗಿ ಲಕ್ಷಾಂತರ ರೂ. ವೆಚ್ಚ ಮಾಡಿ 2021 ರಲ್ಲಿ ನಿರ್ಮಿಸಲಾದ ಟ್ಯಾಂಕ್ ಹೆಡತಲೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷೃದಿಂದ ನಿರುಪಯುಕ್ತವಾಗಿದೆ. ಇದನ್ನು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಇತ್ತ ನೀರೂ ಇಲ್ಲ, ಅತ್ತ ಟ್ಯಾಂಕ್ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ಸಂಬಂಧಪಟ್ಟವರು ಇತ್ತ ಗಮನಹರಿಸಿ ಅಗತ್ಯ ಕ್ರಮ ವಹಿಸಲಿ.
ಆರ್. ಸುಂದರೇಶ್ ಬಿಎಸ್ಪಿ ಯುವ ಮುಖಂಡ, ಸಿಂಗಾರಿಪುರ, ನಂಜನಗೂಡು ತಾಲೂಕು
ಪ್ರಸ್ತುತ ಬೇಸಿಗೆ ಕಾಲವಾಗಿರುವ ಕಾರಣ ಕುಡಿಯುವ ನೀರು ಸಮಸ್ಯೆ ಉಂಟಾಗುತ್ತದೆ. ಗ್ರಾಮದಲ್ಲಿ ಈಗಾಗಲೇ ನೀರಿನ ಟ್ಯಾಂಕ್ ಇದ್ದು, ಅಲ್ಲಿಂದಲೇ ನೀರು ಪೂರೈಸಲಾಗುತ್ತದೆ. ಹೊಸ ಟ್ಯಾಂಕ್‌ಗೂ ನೀರು ತುಂಬಿಸಿದರೆ ಗ್ರಾಮಕ್ಕೆ ನೀರಿನ ಸಮಸ್ಯೆಯೇ ಉದ್ಭವಿಸುವುದಿಲ್ಲ. ಸಂಬಂಧಪಟ್ಟವರು ಕ್ರಮ ವಹಿಸಿದರೆ ಒಳಿತು.
ಕರಿಯ ಸದಸ್ಯ, ಹೆಡತಲೆ ಗ್ರಾಮ ಪಂಚಾಯಿತಿ
ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಸಲುವಾಗಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಈ ಟ್ಯಾಂಕ್ ನಿರ್ಮಾಣ ಮಾಡಿದೆ. ಪ್ರಸ್ತುತ ಗ್ರಾಮಸ್ಥರು ಫ್ಲೋರೈಡ್‌ಯುಕ್ತ ಬೋರ್‌ವೆಲ್ ನೀರನ್ನು ಕುಡಿಯುತ್ತಿದ್ದಾರೆ. ಇದರಿಂದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಮಹದೇವನಗರ ಶುದ್ಧ ಕುಡಿಯುವ ನೀರಿನ ಘಟಕದಿಂದ ಗ್ರಾಮಕ್ಕೆ ನೀರು ಪೂರೈಸಬೇಕು. ಇಲ್ಲವೇ ಗ್ರಾಮದಲ್ಲಿ ಒಂದು ಶುದ್ಧ ನೀರಿನ ಘಟಕವನ್ನು ಸಂಬಂಧಪಟ್ಟವರು ನಿರ್ಮಿಸಿ ಕೊಡಬೇಕು.
ಎಸ್.ಕೆ. ಪ್ರಕಾಶ್ ಮುಖಂಡ ಸಿಂಗಾರಿಪುರ
ಸಿಂಗಾರಿಪುರ ಗ್ರಾಮದಲ್ಲಿ 2021ರಲ್ಲಿ ನಿರ್ಮಿಸಲಾಗಿರುವ ಟ್ಯಾಂಕ್‌ಗೆ ನೀರು ತುಂಬಿಸದಿರುವ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ವಿದ್ಯುತ್ ಸಂಪರ್ಕ ಕೊರತೆಯಿಂದ ಟ್ಯಾಂಕ್‌ಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ ಎನ್ನುವ ಉತ್ತರ ಬಂದಿದೆ. ಶೀಘ್ರ ಈ ಸಂಬಂಧ ಪರಿಶೀಲಿಸಿ ನೀರು ತುಂಬಿಸುವ ಕೆಲಸ ಮಾಡಲಾಗುವುದು.
ರಾಜಶೇಖರ್ ಪಿಡಿಒ, ಹೆಡತಲೆ ಗ್ರಾಮ ಪಂಚಾಯಿತಿ