

ಗುಂಡ್ಲುಪೇಟೆ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಬಳಕೆಗೆ ತರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರತಿ ದಿನವೂ ಸಾವಿರಾರು ಪ್ರಯಾಣಿಕರು ಆಗಮಿಸುವ ಬಸ್ ನಿಲ್ದಾಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಘಟಕ ನಿರ್ಮಿಸಿದ್ದರೂ ಉದ್ಘಾಟನೆ ಭಾಗ್ಯವಿಲ್ಲ. ಹೀಗಾಗಿ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಹೆಚ್ಚಿನ ಹಣ ಕೊಟ್ಟು ಕುಡಿಯುವ ನೀರಿನ ಬಾಟಲ್ ಖರೀದಿಸಬೇಕಿದೆ.
2021-22ರಲ್ಲಿ ಶಾಸಕರ ಪ್ರದೇಶಾಭಿವೃದ್ಧಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ ಮೂರು ವರ್ಷಗಳಾದರೂ ಸಾರ್ವಜನಿಕರ ಬಳಕೆಗೆ ಮುಕ್ತವಾಗದೆ ನಿರುಪಯುಕ್ತವಾಗುತ್ತಿದೆ. ಇದರ ಒಳಗೆ ಅಳವಡಿಸಿರುವ ಟ್ಯಾಂಕ್, ಮೋಟಾರುಗಳು ತುಕ್ಕುಹಿಡಿಯುತ್ತಿವೆ. ಇದು ಸಂಪೂರ್ಣ ಹಾಳಾಗುವ ಮೊದಲೇ ಸಾರ್ವಜನಿಕರ ಬಳಕೆಗೆ ತರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.