

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕೇವಲ ಮೇಲ್ವರ್ಗದರನ್ನೇ ದೂಷಿಸುವುದು ತರವಲ್ಲ. ಇಂದೂ ಜೀವಂತವಾಗಿರುವ ಪದ್ಧತಿಯಂತೆ ದಲಿತರಿಗೂ ಕೊರಗರು ಅಸ್ಪೃಶ್ಯರಾಗುತ್ತಿದ್ದಾರೆ. ದಲಿತ ಹಾಗೂ ಕೊರಗ ಸಮುದಾಯದವರು ಅಂತರ್ಜಾತಿ ವಿವಾಹವಾದರೆ ಮನೆಗೆ ಸೇರಿಸಿಕೊಳ್ಳದೆ ಅಸ್ಪಶ್ಯತೆ ಮಾಡಲಾಗುತ್ತಿರುವುದು ನಾವು ಬದಲಾಗಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಪಾಂಗಾಳ ಬಾಬು ಕೊರಗ ವಿಷಾದ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಾಪು ತಾಲೂಕು ಘಟಕ ಆಶ್ರಯದಲ್ಲಿ ಪಲಿಮಾರು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ‘ನೆಲದುಲಿಯಾಗಿ ಸಾಮಾಜಿಕ ತಲ್ಲಣಗಳಿಗೆ ಸಾಹಿತ್ಯಿಕ ಪ್ರತಿಸ್ಪಂದನೆ’ ಪರಿಕಲ್ಪನೆಯೊಂದಿಗೆ ಶನಿವಾರ ಕಾಪು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರಗರು ಇಂದಿಗೂ ಸ್ವಚ್ಛತೆ ಕೆಲಸ ಮಾಡುತ್ತಿರುವುದು ದುರ್ದೈವ. ಅಂದಿಗೂ ಇಂದಿಗೂ ಹೆಚ್ಚು ಬದಲಾಗಿಲ್ಲ ಎನ್ನುವುದನ್ನು ತೋರಿಸುತ್ತದೆ. ಕಾಪು ತಾಲೂಕು ಸುಕ್ಷಿತರ ನಾಡು, ಇಲ್ಲಿ ಸರ್ವಧರ್ಮದವರು ಜೀವಿಸುತ್ತಿದ್ದಾರೆ. ಜಾತಿ, ಧರ್ಮ ಸಾಮರಸ್ಯಗಳು ಒಂದು ಹಂತದ ಗಡಿ ದಾಟಿ ಕೆಟ್ಟಿಲ್ಲ. ಹಾಗಂತ ಇಲ್ಲಿ ಎಲ್ಲವೂ ಸರಿಯಾಗಿದೆ ಎನ್ನಲಾಗುವುದಿಲ್ಲ. ಇಲ್ಲಿನ ಜನ ಬುದ್ಧಿವಂತರಿದ್ದಾರೆ ನಿಜ. ರಾಜ್ಯದ ಕೆಲವು ಕಡೆ ನಡೆಯುವ ಕೋಮು ಸಂಘರ್ಷಗಳಂತೆ ಇಲ್ಲಿನ ಭಾವೈಕ್ಯಕ್ಕೆ ಧಕ್ಕೆ ತರುವಂತಹ ಕೆಲಸವನ್ನು ನಾವು ಮಾಡಿಲ್ಲ. ಆದರೆ ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಇಂದಿಗೂ ಅಸ್ಪೃಶ್ಯತೆಯಿಂದ ಮುಕ್ತಿ ಸಿಕ್ಕಿಲ್ಲ ಎಂದು ವಿಷಾದಿಸಿದರು.
ಆಶಯ ನುಡಿಗಳನ್ನಾಡಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಆಂಗ್ಲ ಮಾಧ್ಯಮ ಆರಂಭದಿಂದ ಮಕ್ಕಳ ದಾಖಲಾತಿ ಹೆಚ್ಚಾದರೂ, ಕನ್ನಡ ಮಾಧ್ಯಮ ವಿಭಾಗದಲ್ಲಿ ಮಕ್ಕಳ ದಾಖಲಾತಿಯಾಗದಿರುವುದು ಬೇಸರದ ಸಂಗತಿ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೆ.ಎಸ್.ಶ್ರೀಧರ ಮೂರ್ತಿ ಸಮ್ಮೇಳನಾಧ್ಯಕ್ಷರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು. ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ರಾಷ್ಟ್ರ ಧ್ವಜಾರೋಹಣ, ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಗ್ರಾಪಂ ಉಪಾಧ್ಯಕ್ಷ ರಾಯೇಶ್ವರ ಪೈ, ಪಿಡಿಒ ಶಶಿಧರ ಆಚಾರ್ಯ, ಪಿ.ಆರ್.ಶ್ರೀನಿವಾಸ ಉಡುಪ, ಲಕ್ಷ್ಮಣ ಶೆಟ್ಟಿ ನಂದಿಕೂರು, ಜೆರಾಲ್ಡ್ ಸಂದೀಪ್ ಡಿಮೆಲ್ಲೋ, ಮಹಮ್ಮದ್ ಶೇಖಬ್ಬ, ಗೋಕುಲ್ ಪಲಿಮಾರು, ಪ್ರಸಾದ್ ಪಲಿಮಾರು, ಶೋಭಾ, ಜಿತೇಂದ್ರ ಫುರ್ಟಾಡೋ, ಯೋಗೀಶ್ ಸುವರ್ಣ, ಸತೀಶ್ ಕುಮಾರ್ ಹೊಯಿಗೆ, ಲಕ್ಷ್ಮಣ ಕೋಟ್ಯಾನ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ, ನೀಲಾನಂದ ನಾಯ್ಕ, ಕೃಷ್ಣಕುಮಾರ್ ಮಟ್ಟು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷೆ ಗ್ರೆಟ್ಟಾ ಮೊರಾಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪಿಲಾರು ಸುಧಾಕರ ಶೆಣೈ, ಎಸ್.ಎಸ್. ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.
ನಮ್ಮವರಿಗೆ ಆಂಗ್ಲ ಭಾಷೆಯ ವ್ಯಾಮೋಹ. ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಕನ್ನಡ-ಕನ್ನಡ ಎಂದು ಪಠಿಸುವ ಕೆಲವು ಹೋರಾಟಗಾರರೂ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ. ಸರ್ಕಾರಿ ಕೆಲಸವೇ ಬೇಕೆಂದು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರೂ ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಸಂಸ್ಥೆಗಳಿಗೆ ಕಳುಹಿಸುತ್ತಾರೆ. ನಮ್ಮ ಹಳ್ಳಿಯಲ್ಲೂ ಮಕ್ಕಳ ಹೆತ್ತವರು ತಮ್ಮ ಮನೆ ಮಾತೂ ಮರೆತು, ಹರುಕು ಮುರುಕು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಿರುವುದು ಖೇದಕರ. ಅನ್ಯ ರಾಜ್ಯದವರು ಅವರ ಭಾಷೆಯನ್ನೇ ಬಳಸಿದರೂ ನಾವು ಅವರೊಂದಿಗೆ ಹೊಂದಾಣಿಕೆ ಮಾಡಿ ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ಹಾಗಾದರೆ ಕನ್ನಡ ಉಳಿಯುವುದೆಲ್ಲಿ? ನಾವು ಇತರ ಭಾಷೆಗಳಿಗೂ ಗೌರವ ಕೊಡೋಣ, ಅದನ್ನೂ ಕಲಿಯೋಣ ನಮ್ಮ ಮಕ್ಕಳಿಗೂ ಕಲಿಸೋಣ ಎಂದು ಪಾಂಗಾಳ ಬಾಬು ಕೊರಗ ಹೇಳಿದರು.
ಸಮ್ಮೇಳನವನ್ನು ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುಸ್ತಕ ಬರೆಯುವುದು, ಓದುವುದು, ಕೊಂಡುಕೊಳ್ಳುವುದು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಅಲ್ಲಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳನದಂತಹ ಕಾರ್ಯಕ್ರಮಗಳು ನಮ್ಮನ್ನು ಕಳೆಗಟ್ಟುವಂತೆ ಮಾಡುತ್ತದೆ. ಸೃಷ್ಟಿಯ ಒಳಿತುಗಳ ದೇಶ, ವಿವಿಧತೆಯಲ್ಲಿ ಏಕಾಗ್ರತೆ ಸೂತ್ರ ಬೆಸೆದ ಸಂಸ್ಕೃತಿ, ಗತಯುಗದ, ವೈಭವದ ಸ್ಮರಣೆ ಹೊಸಯುಗದ ಬದುಕಿನೊಂದಿಗೆ ನಾವು ಮಾರ್ಗದರ್ಶನ ನೀಡುವ ಯೋಚನೆ ಯೋಜನೆ ಹರಿದುಬರಲಿ ಎಂದು ಹಾರೈಸಿದರು.
ಪಲಿಮಾರು ಅಸ್ತಪಡ್ಪು ಮೈದಾನದಿಂದ ಸಮ್ಮೇಳನ ಸರ್ವಾಧ್ಯಕ್ಷರ ಸ್ವಾಗತ ಹಾಗೂ ಕನ್ನಡ ಮಾತೆ ಭುವನೇಶ್ವರಿ ದೇವಿಯ ಶೋಭಾಯಾತ್ರೆಗೆ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಚಾಲನೆ ನೀಡಿದರು. ವಿವಿಧ ಕಲಾತಂಡಗಳ ಪಾಲ್ಗೊಳ್ಳುವಿಕೆಯಲ್ಲಿ ಸಮ್ಮೇಳನ ಸಭಾಂಗಣದವರೆಗೆ ಆಕರ್ಷಕ ಪುರಮೆರವಣಿಗೆ ನಡೆಯಿತು. ಊಟ ಉಪಹಾರ ಸಹಿತ ಸಕಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸಮ್ಮೇಳನ ಸ್ವಾಗತ ಸಮಿತಿ ಗಮನಸೆಳೆಯಿತು. ಗಣೇಶ್ ಗಂಗೊಳ್ಳಿ ಮತ್ತ ತಂಡದಿಂದ ಕನ್ನಡ ಗೀತ ಗಾಯನ, ಪಡುಬೆಳ್ಳೆ ಪಾಂಬೂರು ನವೋದಯ ಕೊರಗರ ಸಾಂಸ್ಕೃತಿಕ ಕಲಾ ತಂಡದ ಕಲಾಪ್ರಸ್ತುತಿ, ವಿವಿಧ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪುಸ್ತಕ ಪ್ರದರ್ಶನ ಹಾಗೂ ಕಲಾವಿದ ವೆಂಕಿ ಪಲಿಮಾರು ರಚಿಸಿದ ಕಲಾಕೃತಿಗಳ ನಡುವೆ ಛಾಯಾಚಿತ್ರ ತೆಗೆದುಕೊಳ್ಳುವ ವ್ಯವಸ್ಥೆ ಜನ ಹಾಗೂ ಸಾಹಿತ್ಯಾಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.