ಅನ್ನಕ್ಕೆ ಕನ್ನವಿಟ್ಟ ಅಕಾಲಿಕ ಮಳೆ!

Untimely rains spoil rice harvest!
ಗೋಕರ್ಣ ಮತ್ತು ಸುತ್ತಲಿನ ಅನೇಕ ಕಡೆಗಳಲ್ಲಿ ಭಾರೀ ಮಳೆ ಮತ್ತು ಬಿರುಸು ಗಾಳಿಗೆ ಧರಾಶಾಯಿಯಾಗಿ ನೀರಲ್ಲಿ ಮುಳುಗಿದ ತೆನೆ ಭರಿತ ಭತ್ತದ ಪೈರು.
Published on

ಗೋಕರ್ಣ: ಕಳೆದ ಒಂದು ವಾರದಿಂದ ಪ್ರಾರಂಭವಾಗಿರುವ ಅಕಾಲಿಕ ಮಳೆ ಎರಡು ಮೂರು ದಿನಗಳಿಂದ ತೀವ್ರಗೊಂಡು ಬೆಳೆದು ನಿಂತಿದ್ದ ತೆನೆ ಭರಿತ ಭತ್ತದ ಗದ್ದೆಗಳನ್ನು ಜಲಾವೃತಗೊಳಿಸಿದೆ. ಸಮುದ್ರ ಅಂಚಿನ ಬೇಲೆಹಿತ್ತಲು, ಬಿಜ್ಜೂರು, ತಾರಮಕ್ಕಿ, ಶಶಿಹಿತ್ತಲು, ಬಾವಿಕೊಡ್ಲ, ನಾಡುಮಾಸ್ಕೇರಿಯಲ್ಲಿನ ಗದ್ದೆಗಳು ನೀರು ತುಂಬಿ ಹಳ್ಳದಂತಾಗಿವೆ.

ದುರುಪಯೋಗವಾದ ಹಳ್ಳಗಳು

ಈ ಭಾಗದ ಎಲ್ಲ ಕಡೆಗಳಲ್ಲಿ ಗದ್ದೆಗಳಲ್ಲಿನ ಮಳೆ ನೀರು ಅದಕ್ಕೆ ಹೊಂದಿಕೊಂಡಿರುವ ಸಾರ್ವಜನಿಕ ಹಳ್ಳಗಳ ಮೂಲಕ ಸಮುದ್ರಕ್ಕೆ ಹೋಗುವ ವ್ಯವಸ್ಥೆ ಬಹು ಹಿಂದಿನಿಂದ ಚಾಲ್ತಿಯಲ್ಲಿತ್ತು. ಗದ್ದೆಗಳಲ್ಲಿನ ಭತ್ತದ ಬೆಳೆ ನೀರಿಗೆ ಆಹುತಿಯಾಗದಂತೆ ರಕ್ಷಣಾ ಕಾರ್ಯ ನಿರ್ವಹಿಸುತ್ತ ಬಂದಿವೆ. ಗೋಕರ್ಣದ ನಾನಾಕಡೆಗಳಲ್ಲಿ ಮಳೆ ನೀರು ಹೊರ ಸಾಗಿಸುವ 12 ಕಿಮಿಗೂ ಹೆಚ್ಚಿನ ಉದ್ದದ ಹಳ್ಳಗಳು ಈಗಲೂ ಕಾರ್ಯ ನಿರ್ವಹಿಸುತ್ತಿವೆ. ಇಂತಹ ಹಳ್ಳಗಳ ಏರ್ಪಾಟು ಈ ಭಾಗದ ಹೆಚ್ಚಿನ ಗ್ರಾಮಗಳಲ್ಲೂ ಇವೆ. ಆದರೆ ಇತ್ತೀಚಿನ ಎರಡು ಮೂರು ದಶಕಗಳಿಂದ ಬೆಳೆಯುತ್ತ ಸಾಗಿದ ಪ್ರವಾಸೋದ್ಯಮಕ್ಕಾಗಿ ಮಳೆ ನೀರು ಹೊರಕ್ಕೆ ಸಾಗಿಸುವುದಕ್ಕಾಗಿ ಮಾತ್ರ ನಿರ್ಮಿಸಲ್ಪಟ್ಟ ಇಂತಹ ಹಳ್ಳಗಳನ್ನು ದುರುಪಯೋಗ ಮಾಡಿಕೊಳ್ಳುವಂತಾಯಿತು. ಮನೆ, ಹೋಟೆಲ್ ಮತ್ತು ವಸತಿ ಗೃಹಗಳ ದಿನ ನಿತ್ಯದ ಎಲ್ಲ ಬಗೆಯ ತ್ಯಾಜ್ಯಗಳನ್ನು ನೇರವಾಗಿ ಹಳ್ಳಗಳಿಗೆ ಬಿಡಲಾಯಿತು. ಇದರಿಂದ ಪ್ರವಾಸೋದ್ಯಮದ ಎಲ್ಲ ತ್ಯಾಜ್ಯಗಳ ಭಂಡಾರವಾದ ಹೆಚ್ಚಿನ ಹಳ್ಳಗಳು ಹೂಳಿನಿಂದ ಭರ್ತಿಯಾಗಿವೆ. ಕಾಲ ಕಾಲಕ್ಕೆ ಇವುಗಳ ಹೂಳನ್ನು ಸ್ವಚ್ಛಗೊಳಿಸದೆ ಇರುವುದರಿಂದ ಇಲ್ಲಿನ ಪ್ರಮುಖ ಭಾಗದ ಮತ್ತು ವಿವಿಧ ಕಡೆಗಳಲ್ಲಿ ಕೃಷಿ ಭೂಮಿಗಳಲ್ಲಿ ಸಂಗ್ರಹವಾಗುವ ಮಳೆ ನೀರು ಹಳ್ಳಗಳ ಮೂಲಕ ಸಮುದ್ರ ಸೇರಲಾಗದೆ ಗದ್ದೆಗಳನ್ನು ಮುಳುಗಿಸುವಂತಾಗಿದೆ. ಇದರ ಜತೆಗೆ ಪ್ರವಾಸೋದ್ಯಮದ ಬೇರೆ ಬೇರೆ ಅಗತ್ಯಗಳಿಗಾಗಿ ಗದ್ದೆಗಳನ್ನು ಮುಚ್ಚಿ ವಸತಿ ಗೃಹ ಮತ್ತಿತರ ಕಟ್ಟಡಗಳನ್ನು ನಿರ್ಮಿಸಿ ಸುತ್ತಲಿನ ಗದ್ದೆಗಳ ನೀರಿನ ಪಾರಂಪರಿಕ ಹರಿವಿಗೆ ಕೂಡ ತಡೆ ಹಾಕಲಾಗಿದೆ.

ಗರಿಷ್ಠ ಕೃಷಿ ಕ್ಷೇತ್ರ

ಗೋಕರ್ಣ ಸೇರಿ ಗಂಗಾವಳಿ ನದಿಯಿಂದ ನಾಡುಮಾಸ್ಕೇರಿ, ಹನೇಹಳ್ಳಿ, ಮಾದನಗೇರಿ, ಹಿರೇಗುತ್ತಿ, ಮೊರಬಾ ಗ್ರಾಮಗಳು ತಾಲೂಕಿನಲ್ಲಿಯೇ ಅತ್ಯಧಿಕ ಕೃಷಿ ಕ್ಷೇತ್ರವನ್ನು ಇವತ್ತಿಗೂ ಸಂರಕ್ಷಿಸಿಕೊಂಡು ಬಂದಿರುವುದು ವಿಶೇಷ. ಈ ಆರು ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರ ಎಕರೆಗೂ ಮಿಕ್ಕಿದ ಗದ್ದೆಗಳಲ್ಲಿ ಬಗೆ ಬಗೆಯ ಭತ್ತವನ್ನು ಬಿತ್ತಿ ಬೆಳೆ ತೆಗೆಯುವ ಸಾಂಪ್ರದಾಯಿಕ ಕೃಷಿ ಕಾರ್ಯ ಇಂದಿಗೂ ಮುಂದುರಿದಿದೆ. ಆದರೆ ಈಗಿನ ಅಕ್ಟೋಬರ್ ಕೊನೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ನೀರು ಗದ್ದೆಗಳನ್ನು ಮುಳುಗಿಸಿದರೆ, ಕಳೆದ ಕೆಲವು ದಿನಗಳಿಂದ ಕರಾವಳಿಯಾದ್ಯಂತ ಬೀಸುತ್ತಿರುವ ಬಿರುಸು ಗಾಳಿ ತೆನೆ ತುಂಬಿಕೊಂಡು ನಿಂತಿದ್ದ ಪೈರನ್ನು ನೀರಲ್ಲಿ ಮಲಗುವಂತೆ ಮಾಡಿದೆ.

ಹೆಚ್ಚಿನ ಬೀಜ ಬಿತ್ತನೆ

ಕೃಷಿ ಇಲಾಖೆಯ ದಾಖಲೆಯ ಪ್ರಕಾರ ಕಳೆದ ವರ್ಷಕ್ಕಿಂತ ಹೆಚ್ಚು ಬೀಜವನ್ನು ಈ ವರ್ಷ ರೈತರು ಖರೀದಿಸಿ ಬಿತ್ತನೆ ಮಾಡಿರುವುದು ಕಂಡು ಬರುತ್ತಿದೆ. ಕಳೆದ ಸಾಲಿನಲ್ಲಿ ಒಟ್ಟೂ 211.45 ಕ್ವಿಂ. ವಿವಿಧ ಪ್ರಕಾರದ ಬೀಜಗಳನ್ನು ರೈತರು ಖರೀದಿಸಿದ್ದರೆ ಈ ವರ್ಷ 241.23 ಕ್ವಿಂ. ಬೀಜ ಇಲ್ಲಿನ ಕೃಷಿ ಕೇಂದ್ರದಲ್ಲಿ ಮಾರಾಟವಾಗಿದೆ. ಈ ಭಾಗದ ರೈತರು ಗರಿಷ್ಠವಾಗಿ ಜಯಾ ಜಾತಿಯ ಬೀಜವನ್ನು ಬಿತ್ತುತ್ತಾರೆ. ಕಳೆದ ವರ್ಷ 170.75 ಕ್ವಿಂ. ಜಯಾ ಮಾರಾಟವಾಗಿದ್ದರೆ, ಈ ಬಾರಿ ಅದು 208.25 ಕ್ವಿಂಗೆ ಮುಟ್ಟಿದೆ. ಈ ಬೀಜ ವಹಿವಾಟಿನ ಲೆಕ್ಕಾಚಾರದ ಪ್ರಕಾರ ಹಿಂದಿನ ವರ್ಷಕ್ಕಿಂತ ಹೆಚ್ಚು ಭತ್ತದ ಬೆಳೆಯನ್ನು ಈ ಮನ್ಸೂನಿನಲ್ಲಿ ರೈತರು ಬೆಳೆಸುವ ಶ್ರಮ ತೆಗೆದುಕೊಂಡಿದ್ದಾರೆ. ಇಂತಹ ಪರಿಶ್ರಮದ ಶೇ. 60ಕ್ಕೂ ಅಧಿಕ ಬೆಳೆಯನ್ನು ಈಗಿನ ಮಳೆ ಆಹುತಿ ತೆಗೆದುಕೊಂಡಿದೆ ಎನ್ನುವುದು ರೈತರ ಅಂದಾಜು.

ವ್ಯರ್ಥವಾಯ್ತು ಬೆವರಿನಹನಿಗಳು

ಈ ವರ್ಷ ಮೇ ಮಧ್ಯ ಭಾಗದಲ್ಲಿಯೇ ವರ್ಷಕ್ಕಿಂತ ಮುಂಚೆ ಪ್ರಾರಂಭವಾದ ಮನ್ಸೂನ್ ಕೃಷಿ ಚಟುವಟಿಕೆ ತಡವಾಗಿ ಪ್ರಾರಂಭವಾಗುವಂತೆ ಮಾಡಿತು. ಜತೆಗೆ ಸೆಪ್ಟೆಂಬರ್ ವೇಳೆ ಇಲ್ಲಿನ ನಾಡುಮಾಸ್ಕೇರಿ, ಬಾವಿಕೊಡ್ಲ ಮತ್ತು ಮಾದನಗೇರಿ ಗದ್ದೆಗಳಲ್ಲಿ ಭತ್ತಕ್ಕೆ ಬಿಳಿ ಎರಗಲು ಕೀಟ ಬಾಧೆ ಕಾಣಿಸಿಕೊಂಡಿತು. ಮಳೆಗೆ ತೀವ್ರವಾಗಿ ವ್ಯಾಪಿಸಿಕೊಳ್ಳುವ ಈ ಸಾಂಕ್ರಾಮಿಕ ಕೀಟ ಬಾಧೆಯನ್ನು ತಡೆಯಲು ಸ್ಥಳೀಯ ಕೃಷಿ ಇಲಾಖೆ ಸಿಬ್ಬಂದಿ ಅಗತ್ಯ ಕೀಟ ನಾಶಕಗಳನ್ನು ಸಕಾಲಕ್ಕೆ ರೈತರಿಗೆ ಒದಗಿಸಿ ಉಳಿದ ಭತ್ತದ ಗದ್ದೆಗಳಿಗೆ ರೋಗ ವ್ಯಾಪಿಸಿಕೊಳ್ಳದಂತೆ ನಿರ್ಬಂಧಿಸಿದರು. ಕಳೆದ ವರ್ಷ ಈ ಭಾಗದಲ್ಲಿ ತೆನೆ ದುಂಬಿ ಕಾಟ ವ್ಯಾಪಿಸಿಕೊಂಡು ಭತ್ತದ ಬೆಳೆ ಶೇ. 40ರಷ್ಟು ಕ್ಷೀಣಿಸುವಂತೆ ಮಾಡಿತ್ತು.ಆದರೆ ಈ ಬಾರಿ ರೋಗಯುಕ್ತ ಕ್ರಮಗಳಿಂದ ನಿಯಂತ್ರಣವಾದ ಕಾರಣ ಪುಷ್ಟವಾದ ಭತ್ತದ ಬೆಳೆ ಮೇಲೇಳುವಂತಾಯಿತು. ಆದರೆ ಈ ಎಲ್ಲ ರೈತರ ಪರಿಶ್ರಮ ದೀಪಾವಳಿ ಸಮಯದಿಂದ ಅವ್ಯಾಹತವಾಗಿ ಕಾಡಿದ ಮಳೆ ರೈತರ ಬೆವರಿನ ಬೆಳೆಗಳನ್ನು ನೀರಿಗೆ ಆಹುತಿಯಿತ್ತು ವರ್ಷದ ಅನ್ನಕ್ಕೆ ಕನ್ನವಿಟ್ಟಂತಾಗಿದೆ!

ಭತ್ತದ ಬೆಳೆಯ ಕೊಯ್ಲಿನ ವೇಳೆ ಕಾಣಿಸಿಕೊಂಡ ಅತೀವ ಮಳೆ ಮತ್ತು ವೇಗದ ಗಾಳಿ ಭತ್ತವನ್ನು ಮನೆಗೆ ತುಂಬಿಸಿಕೊಳ್ಳದಂತೆ ಮಾಡಿದೆ.ಮಳೆ ಇನ್ನೂ ಮುಂದುವರೆದಲ್ಲಿ ಬೆಳೆದ ಭತ್ತ ಕೈತಪ್ಪುವ ಜೊತೆಗೆ ನೀರಲ್ಲಿ ಮುಳುಗಿದ ಬೀಜ ಮೊಳಕೆ ಒಡೆದು ಹುಲ್ಲು ಪೈರುಗಳು ಕಹಿಯಾಗಿ ಜಾನುವಾರಗಳ ಆಹಾರಕ್ಕೂ ಸಂಚಕಾರ ತರುವ ಲಕ್ಷಣಗಳಿವೆ. ಹುಲಿಯಾ ಅಂಗಯ್ಯ ಗೌಡ ತಾರಮಕ್ಕಿ ಅಧ್ಯಕ್ಷ ಶ್ರೀ ಕೇತಕಿವಿನಾಯಕ ರೈತ ಕಾರ್ಮಿಕರ ಅಭಿವೃದ್ಧಿ ಸಂಘ ಗೋಕರ್ಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net