

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಕಾಫಿ ಬೆಳೆಗಾರರಿಗೆ ಬರೆ ಎಳೆದಿದೆ. ಅಕಾಲಿಕ ಮಳೆಗೆ ಕಾಫಿ ಗಿಡಗಳು ಹೂವು ಬಿಟ್ಟು ಇಳುವರಿ ಮೇಲೆ ಹೊಡೆತ ಬಿದ್ದು ನಷ್ಟ ಉಂಟು ಮಾಡಿದೆ.
ಅರೆಮಲೆನಾಡು ಹೋಬಳಿ ಮಲ್ಲಿಪಟ್ಟಣ ಭಾಗದಲ್ಲಿ ಹೆಚ್ಚಾಗಿ ಕಾಫಿ ಬೆಳೆ ಅವಲಂಬಿಸಲಾಗಿದೆ. ಮಳೆಯಿಂದಾಗಿ ಈಗಾಗಲೇ ಕಾಫಿ ಗಿಡಗಳಲ್ಲಿ ಹೂ ಕಾಣಿಸಿಕೊಂಡಿದೆ. ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿಯಲ್ಲಿ ಕಾಫಿ ಹಣ್ಣುಗಳ ಕಟಾವು ಕಾರ್ಯ ನಡೆಯುತ್ತದೆ. ಮುಂಗಾರು ಪೂರ್ವ ಮಳೆಗೆ ಗಿಡಗಳಲ್ಲಿ ಮಾರ್ಚ್ ಇಲ್ಲವೇ ಏಪ್ರಿಲ್‌ನಲ್ಲಿ ಹೂ ಬಿಡಬೇಕು. ಆದರೆ ಈ ಬಾರಿ ಬಿದ್ದ ಅಕಾಲಿಕ ಮಳೆಗೆ ಗಿಡಗಳಲ್ಲಿ ಜನವರಿಯಲ್ಲೇ ಹೂ ಬಿಟ್ಟಿವೆ. ಇತ್ತ ಹಣ್ಣುಗಳನ್ನು ಕಟಾವು ಮಾಡಲಾಗದೆ, ಮತ್ತೊಂದೆಡೆ ಗಿಡಗಳಲ್ಲಿ ಹೂವುಗಳು ಉದುರಿತ್ತಿದ್ದು ಬೆಳೆಗಾರರು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಹಣ್ಣು ಕಟಾವು ಮಾಡುವ ವೇಳೆ ಗಿಡಗಳಲ್ಲಿ ಬಿಟ್ಟಿರುವ ಹೂವುಗಳು ಉದುರುತ್ತಿವೆ ಎಂದು ಬೆಳೆಗಾರರು ಅವಲತ್ತುಕೊಂಡಿದ್ದಾರೆ.
ಕಾಫಿ ಬೆಳೆ ಎರಡು ವರ್ಷಗಳಿಗೊಮ್ಮೆ ಇಳುವರಿಯಲ್ಲಿ ಹೆಚ್ಚಳವಾಗುತ್ತದೆ. ಈ ಬಾರಿ ಇಳುವರಿ ಸಾಧಾರಣವಾಗಿದೆ. ಮುಂದಿನ ವರ್ಷ ಅಧಿಕ ಇಳುವರಿ ಸಿಗಬೇಕಿತ್ತು. ದುರದೃಷ್ಟವಶಾತ್ ಅಕಾಲಿಕ ಮಳೆಯಿಂದಾಗಿ ಈಗಾಗಲೇ ಗಿಡಗಳಲ್ಲಿನ ಹೂ ಉದುರುತ್ತಿದ್ದು, ಕೆಲವು ಕಡೆ ಬಾಡಿ ಹೋಗುತ್ತಿವೆ. ಪರಿಣಾಮವಾಗಿ ಶೇ.50ರಷ್ಟು ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ ಎನ್ನುತ್ತಾರೆ ಬೆಳೆಗಾರ ಎಂ.ಆರ್.ರಂಗಸ್ವಾಮಿ.
ಈ ಬಾರಿ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೆಲೆ ಬಂದಿದೆ. 50 ಕೆಜಿ ರೋಬಾಸ್ಟ್ ಹಾಗೂ ಅರೇಬಿಕಾ ಕಾಫಿ ಕಾಳು ಗರಿಷ್ಠ ದರ 11ರಿಂದ 14 ಸಾವಿರ ರೂ. ಗಡಿ ತಲುಪಿದೆ. ಕಾಳು ಬಿಡಿಸದ ಕಾಫಿ ದರ 7ರಿಂದ 9 ಸಾವಿರ ರೂ. ಮಾರಾಟವಾಗುತ್ತಿದೆ. ದುರದೃಷ್ಟವಶಾತ್ ಅಕಾಲಿಕ ಮಳೆ ಕಾಫಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮಾರುಕಟ್ಟೆಯ ಲಾಭ ಬೆಳೆಗಾರರಿಗೆ ಧಕ್ಕದಾಗಿದೆ. ಕಾಫಿ ಬೆಳೆಯಿಂದ ಉತ್ತಮ ಆದಾಯ ಕಂಡುಕೊಳ್ಳಬೇಕೆನ್ನುವ ಬೆಳೆಗಾರರ ಆಸೆಗೆ ಅಕಾಲಿಕ ಮಳೆ ತಣ್ಣೀರೆರಚಿದೆ.