ಅಕಾಲಿಕ ಮಳೆಗೆ ಬಳ್ಳಾರಿ ಜಿಲ್ಲಾದ್ಯಂತ ಭತ್ತ, ಬಾಳೆಯ ಬೆಳೆ ಹಾನಿ

Huvinahadagali Crop Damage Bele Hani
Published on

ಹೂವಿನಹಡಗಲಿ: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಕಟಾವಿಗೆ ಬಂದಿರುವ ನೂರಾರು ಎಕರೆ ಭತ್ತ ಹಾಗೂ ಬಾಳೆ ಬೆಳೆ ಹಾನಿಯಾಗಿದೆ. ತುಂಗಭದ್ರಾ ನದಿ ತೀರದ ರಾಜವಾಳ, ಹೊನ್ನೂರು, ನವಲಿ, ಬ್ಯಾಲಹುಣ್ಸಿ ಸೇರಿದಂತೆ ಇತರೆ ಕಡೆಗಳಲ್ಲಿ ಕಟಾವಿಗೆ ಬಂದಿರುವ ಭತ್ತ ನೆಲಕ್ಕೊರಗಿದೆ. ರಾಜವಾಳ ವ್ಯಾಪ್ತಿಯಲ್ಲಿ 600 ಎಕರೆಗೂ ಹೆಚ್ಚು ಭತ್ತದ ಬೆಳೆ ಹಾನಿಗೀಡಾಗಿದೆ. ಮಾಗಳ ಗ್ರಾಮದ ಹಳ್ಳಪ್ಪನವರ ಬಸವರಾಜರ ಬಾಳೆ ನೆಲಕ್ಕುರುಳಿದೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಪಟ್ಟಣದಲ್ಲಿ 43.8 ಮೀ.ಮೀ, ಹಿರೇಹಡಗಲಿ 19.8 ಮೀ.ಮೀ ಮಳೆಯಾಗಿದೆ.

ಭೇಟಿ: ಹೂವಿನಹಡಗಲಿ ತಾಲೂಕಿನಲ್ಲಿ ಮಳೆ, ಗಾಳಿಗೆ ಹಾನಿಯಾದ ಬಾಳೆ, ಭತ್ತದ ಬೆಳೆಗಳನ್ನು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ವೀಕ್ಷಿಸಿದರು. ಮಳೆಗೆ ಹಾನಿಯಾದ ಬೆಳೆಗಳ ಬಗ್ಗೆ ಅಧಿಕಾರಿಗಳು ಶೀಘ್ರವೇ ಸರ್ಕಾರಕ್ಕೆ ವರದಿಯನ್ನು ಕಳುಹಿಸಿ ಕೊಡುತ್ತಾರೆ. ಎನ್‌ಡಿಎಫ್ ನಿಯಮಾವಳಿಗಳ ಪ್ರಕಾರ ಹೆಕ್ಟೇರ್ ಭತ್ತಕ್ಕೆ 13,500, ಬಾಳೆ ಹೆಕ್ಟೇರ್‌ಗೆ 18 ಸಾವಿರ ಪರಿಹಾರವನ್ನು ನೀಡಲಾಗುವುದು ಎಂದು ಹೇಳಿದರು. ಅಲ್ಲಿಪುರದ ರೈತ ಶಿವಣ್ಣ, ರಾಜವಾಳ ಶ್ರೀನಿವಾಸರೆಡ್ಡಿ, ಮಾಗಳ ಹಳ್ಳಪ್ಪನವರ ಬಸವರಾಜಪ್ಪನವರ ಜಮೀನುಗಳನ್ನು ಪರಿಶೀಲಿಸಿದರು. ಹರಪನಳ್ಳಿ ಎ.ಸಿ. ಪ್ರಸನ್ನಕುಮಾರ್, ತಹಸೀಲ್ದಾರ್ ಕೆ.ವಿಜಯಕುಮಾರ್, ಕೃಷಿ ಇಲಾಖೆಯ ಎಡಿ ಎಸ್.ಬಿ. ಪಾಟೀಲ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ್ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net