ಸಕಾಲಕ್ಕೆ ದಕ್ಕದ ವೈದ್ಯ ಸೇವೆ

rayalapadu
Published on

ಸಿ.ಎಸ್​.ವಿಶ್ವನಾಥ ಶಾಸ್ತ್ರಿ ರಾಯಲ್ಪಾಡು

ಶ್ರೀನಿವಾಸಪುರ ತಾಲೂಕು ಗಡಿಭಾಗದಲ್ಲಿರುವ ಬೈರಗಾನಪಲ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೇಳೋರು ಕೇಳೋರು ಇಲ್ಲದಂತಾಗಿದ್ದು, ಡಾಕ್ಟರ್​ ಬಂದಿದ್ದು, ಹೋಗಿದ್ದೇ ತಿಳಿಯದಂತಾಗಿರುವುದೇ ಇದಕ್ಕೆ ಸಾ.

ದೇಶ ಪ್ರಗತಿ ಕಾಣಬೇಕೆಂದರೆ ಪ್ರತಿ ಪ್ರಜೆಗಳು ಆರೋಗ್ಯವಂತರಾಗಿರಬೇಕು ಎನ್ನುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಆರೋಗ್ಯಕ್ಕೆ ಒತ್ತು ನೀಡುವ ಜತೆಗೆ ಕಾಲಕಾಲಕ್ಕೆ ಬೇರೆ ಯೋಜನೆಗಳೊಂದಿಗೆ ಆರೋಗ್ಯ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುತ್ತವೆ. ಈ ಅನುದಾನದಲ್ಲಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಗ್ರಾಮೀಣರಿಗೆ ಆರೋಗ್ಯ ಸೇವೆ ನೀಡಲಾಗುತ್ತಿದೆ.

ಆದರೆ, ಬೈರಗಾನಪಲ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಆಡಿದ್ದೇ ಆಟವಾಗಿದೆ. ಬೆಳಗ್ಗೆ 11 ಗಂಟೆಯಾದರೂ ವೈದ್ಯಾಧಿಕಾರಿ ಕೇಂದ್ರಕ್ಕೆ ಬರುವುದಿಲ್ಲ. ಸಂಜೆ 4 ಗಂಟೆ ಬಳಿಕ ಕೈಗೇ ಸಿಗುವುದಿಲ್ಲ ಎಂದು ಸ್ಥಳಿಯ ರೋಗಿಗಳು ಆರೋಪಿಸಿದ್ದಾರೆ.

ರಾಜ್ಯದ ಗಡಿಭಾಗವಾದ ಬೈರಗಾನಪಲ್ಲಿಯ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 7 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸಹಿತ ನಾಲ್ವರು ಸಿಬ್ಬಂದಿ ಇದ್ದು, ವೈದ್ಯರು ಗೈರಾದರೆ ಗೌನಿಪಲ್ಲಿ ಆರೋಗ್ಯ ಕೇಂದ್ರ, ಇಲ್ಲವೆ ನೆರೆಯ ಆಂಧ್ರಪ್ರದೇಶದ ಬಿ.ಕೊತ್ತಕೋಟೆಯ ಖಾಸಗಿ ನರ್ಸಿಂಗ್​ ಹೋಮ್​ಗೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಇದೆ. ಖಾಸಗಿ ಕ್ಲಿನಿಕ್​ಗಳು ಇದನ್ನೇ ಬಂಡವಾಳ ಮಾಡಿಕೊಂಡು ಬಡ ರೋಗಿಗಳಿಂದ ಹಣ ಸುಲಿಯುವ ಕೆಲಸ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗಕ್ಕೆ ತಲುಪದ ಯೋಜನೆ

ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂದು ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವು ಅರ್ಹರನ್ನು ತಲುಪುತ್ತಿಲ್ಲ ಎನ್ನುವುದಕ್ಕೆ ಬೈರಗಾನಪಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರವೇ ಸಾ. ಆಸ್ಪತ್ರೆಯ ಜಾಗ 1 ಎಕರೆ ಇದ್ದು, ಸುತ್ತಲೂ ಕಾಂಪೌಂಡ್​ ನಿರ್ಮಾಣ ಹಂತದಲ್ಲಿದೆ. ಸುಸಜ್ಜಿತ ಕಟ್ಟಡವಿದೆ. ಕಾಲಕಾಲಕ್ಕೆ ವೈದ್ಯರು ಸಿಗುವ ಮತ್ತು ಯೋಜನೆಗಳ ಕುರಿತು ಜನರಿಗೆ ಜಾಗೃತಿ ಮೂಡಿಸಿ, ಸಮರ್ಪಕವಾಗಿ ಜಾರಿ ಮಾಡುವ ಅಗತ್ಯವಿದೆ.

ಹಿರಿಯ ಅಧಿಕಾರಿಗಳು ಭೇಟಿ ನೀಡಲಿ

ಸರ್ಕಾರದ ಆರೋಗ್ಯ ಯೋಜನೆಗಳು ಕೆಲ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇಲಾಖೆ ಹಿರಿಯ ಅಧಿಕಾರಿಗಳು ತಿಂಗಳಿಗೆ ಒಮ್ಮೆಯಾದರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಇಲಾಖೆಯ ಯೋಜನೆಗಳು ಸದ್ಬಳಕೆಯಾಗುತ್ತಿದೆಯೋ? ಇಲ್ಲವೋ? ಎಂಬುವುದನ್ನು ಪರಿಶೀಲಿಸಬೇಕು. ಆಸ್ಪತ್ರೆಯಲ್ಲಿ ಚಿಕ್ಕಪುಟ್ಟ ಚಿಕಿತ್ಸೆ ದೊರೆಯುತ್ತದೆ, ಆದರೆ ಅಪಘಾತ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ತಾಲೂಕುಮಟ್ಟದ ಆಸ್ಪತ್ರೆ ಅಥವಾ ಆಂಧ್ರದ ಆಸ್ಪತ್ರೆ ಹೋಗಬೇಕಾದ ಪರಿಸ್ಥಿತಿ ಇದೆ. ಕಾಯಂ ವೈದ್ಯರು ಇಲ್ಲೇ ವಾಸಿಸುವ ರೀತಿಯಲ್ಲಿ ಇಲಾಖೆ ವ್ಯವಸ್ಥೆ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಪ್ರಾಥಮಿಕ ತಪಾಸಣೆ ಅಗತ್ಯ

ಗ್ರಾಮೀಣ ಜನರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಮುಂದೆ ಬರುವುದಿಲ್ಲ. ಹಾಗಾಗಿ ಇಲಾಖೆಯಿಂದಲೇ ಗ್ರಾಮಮಟ್ಟದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಬೇಕು. ಆ ಮೂಲಕ ಗ್ರಾಮೀಣರಲ್ಲಿನ ಆರೋಗ್ಯ ಸಮಸ್ಯೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ಇದರಿಂದ ರೋಗವನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚುವ ಮೂಲಕ ಉಪಶಮನ ಮಾಡಬಹುದು ಎಂದು ಹಲವು ಗ್ರಾಮಸ್ಥರು ಸಲಹೆ ನೀಡಿದ್ದಾರೆ.

ಅವಶ್ಯ ಇರುವುದು

1. ಲ್ಯಾಬ್​ ಟೆಕ್ನಿಷಿಯನ್​

2. ಲ್ಯಾಬ್​ ಸಲಕರಣೆಗಳು

3. ಫಾಮಾರ್ಸಿಟ್​ ಇಲ್ಲ

ವೈದ್ಯರು ನಿಗದಿತ ಸಮಯಕ್ಕೆ ಬರುತ್ತಿಲ್ಲ, ಹಿರಿಯ ಇಲಾಖಾ ಅಧಿಕಾರಿಗಳು ವೈದ್ಯಾಧಿಕಾರಿಗಳಿಗೆ ನಿಗದಿತ ಸಮಯಕ್ಕೆ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಬೇಕು. ಜನರಿಗೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಹೆಚ್ಚಾದರೆ ಮನೆಯಲ್ಲಿ ಔಷಧ ಇಟ್ಟುಕೊಂಡು ಊರೆಲ್ಲ ಸುತ್ತಾಡಿದಂತಾಗುತ್ತದೆ.

- ಬದ್ದನ್ನ

ಮರಸನಪಲ್ಲಿ ಗ್ರಾಮಸ್ಥ

ಆರೋಗ್ಯ ಕೇಂದ್ರದಲ್ಲಿ ಬಹುತೇಕ ಮೂಲ ಸೌಲಭ್ಯಗಳು ಇದ್ದು, ಲ್ಯಾಬ್​ ಟೆಕ್ನಿಷಿಯನ್​ ವಾರಕ್ಕೆ ಎರಡು ಬಾರಿ ಸೋಮಯಾಲಹಳ್ಳಿ ಆರೋಗ್ಯ ಕೇಂದ್ರದಿಂದ ಇಲ್ಲಿಗೆ ಬಂದು ಕಾರ್ಯನಿರ್ವಹಿಸುತ್ತಾರೆ.

- ಸವೋರ್ತ್ತಮ್​

ವೈದ್ಯಾಧಿಕಾರಿ, ಬೈರಗಾನಪಲ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net