20ರವರೆಗೆ ಕಾಲುವೆಗೆ ನೀರು ಹರಿಸಿ

9 SHARANAPP 1A
ಕಾರಟಗಿಯಲ್ಲಿ ರೈತಪರ ಹಾಗೂ ಇತರೆ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ರೈತ ಸಂಘದ ರಾಜ್ಯಾಧ್ಯಕ್ಷ ಶರಣೇಗೌಡ ಕೇಸರಹಟ್ಟಿ, ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್, ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಹುಲುಗಪ್ಪ, ಜಿಲ್ಲಾ ಉಪಾಧ್ಯಕ್ಷ ತಿಮ್ಮಣ್ಣ ಆದೋನಿ, ಭಾರತ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಹಂಪಸ್ ದುರ್ಗಾ ಇತರರಿದ್ದರು.
Published on

ಕಾರಟಗಿ: ಏ.20ರವರೆಗೆ ಎಡದಂಡೆ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ಅನ್ನದಾತ ರೈತ ಸಂಘ ಸೇರಿ ಇತರೆ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಪಟ್ಟಣದ ಕನಕದಾಸ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ರೈತ ಸಂಘದ ಅಧ್ಯಕ್ಷ ಶರಣೇಗೌಡ ಕೇಸರಹಟ್ಟಿ, ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್ ಮಾತನಾಡಿ, ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ದೊರೆಯುತ್ತಿಲ್ಲ. ಈಗ ಭತ್ತ ತೆನೆ ಬರುವ ಹಂತಕ್ಕೆ ತಲುಪಿದೆ. ಏ.20ರವರೆಗೆ ನೀರು ಕೊಟ್ಟರೆ ಮಾತ್ರ, ಬೆಳೆದು ನಿಂತಿರುವ ಬೆಳೆ ಕೈಸೇರಲು ಸಾಧ್ಯ. ಇಲ್ಲದಿದ್ದರೆ ರೈತರಿಗೆ ಸಂಕಷ್ಟ ಎದುರಾಗಲಿದೆ. ರೈತರ ಬೆಳೆ ರಕ್ಷಣೆಯ ಏಕೈಕ ಉದ್ದೇಶದಿಂದ ಕಳೆದ ಒಂದು ತಿಂಗಳಿನಿಂದಲೂ ನೀರು ಹರಿಸಲೇಬೇಕು ಎಂದು ಆಗ್ರಹಿಸುತ್ತಾ ಬಂದಿದ್ದೇವೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಏ.10ರವರೆಗೆ ಮಾತ್ರ ನೀರು ಹರಿಸುವುದಾಗಿ ಹೇಳುತ್ತಿದ್ದಾರೆ. ಈ ನಿರ್ಧಾರ ಖಂಡನೀಯ ಎಂದರು.

ಪ್ರತಿಭಟನೆ ವೇಳೆ ರೈತ ಮುಖಂಡರು ಸಚಿವ ಶಿವರಾಜ ತಂಗಡಗಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಕೆಲ ನಿಮಿಷ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆ ನಿರತರೊಬ್ಬರ ಕೈಯಲ್ಲಿ ವಿಷದ ಬಾಟಲಿ ಪೊಲೀಸ್ ಕಣ್ಣಿಗೆ ಬಿತ್ತು. ಎಚ್ಚೆತ್ತ ಪೊಲೀಸರು ಅವುಗಳನ್ನು ವಶಕ್ಕೆ ಪಡೆದರು.

ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಹುಲುಗಪ್ಪ, ಜಿಲ್ಲಾ ಉಪಾಧ್ಯಕ್ಷ ತಿಮ್ಮಣ್ಣ ಆದೋನಿ, ಭಾರತ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಹಂಪಸ್ ದುರ್ಗಾರ್, ತಾಲೂಕು ಅಧ್ಯಕ್ಷೆ ಶೇಖಮ್ಮ, ಸುರೇಶ ಚಳ್ಳೂರು, ಸಿದ್ದರಾಮ ರ್ಯಾವಳದ, ದೊಡ್ಡನಗೌಡ ಯರಡೋಣಾ, ಅಂಬಣ್ಣ ಬೂದಗುಂಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net