

ಬೆಳಗಾವಿ: ಕರೊನಾ ವೈರಸ್ ತಡೆಗಟ್ಟಲು ಸರ್ಕಾರ ಘೋಷಣೆ ಮಾಡಿರುವ ಲಾಕ್‌ಡೌನ್ ಸಂದರ್ಭದಲ್ಲಿ ಅತ್ಯವಶ್ಯಕ ವಸ್ತುಗಳ ಸಾಗಣೆ ಹಾಗೂ ಅತ್ಯವಶ್ಯಕ ಕರ್ತವ್ಯಗಳ ಕುರಿತು ನೀಡಿರುವ ಷರತ್ತುಬದ್ಧ ವಿವಿಧ ರೀತಿಯ ಪಾಸ್‌ಗಳನ್ನು ಮೇ 3ರ ವರೆಗೆ ವಿಸ್ತರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ ತಿಳಿಸಿದ್ದಾರೆ.
ಕೋವಿಡ್-19ಗೆ ಸಂಬಂಧಿಸಿದಂತೆ ಕರೊನಾ ವೈರಸ್ ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಅನೇಕ ಕ್ರಮ ಕೈಗೊಂಡಿದ್ದು, ಅದಕ್ಕೆ ಪೂರಕವಾಗಿ ಬೆಳಗಾವಿ ನಗರದಲ್ಲಿ ಲಾಕ್‌ಡೌನ್ ಅವಧಿಯಲ್ಲಿ ವೈದ್ಯರು, ಪತ್ರಕರ್ತರು, ಪತ್ರಿಕೆ ವಿತರಕರು, ಪತ್ರಿಕೆ ಸಾಗಣೆ ಮಾಡುವ ವಾಹನಗಳು, ಹಾಲು, ತರಕಾರಿ, ಅಡುಗೆ ಅನಿಲ, ದಿನಸಿ ವಸ್ತುಗಳ ಸಾಗಣೆ ವಾಹನ, ದಿನಸಿ ಮಾರಾಟಗಾರರಿಗೆ ಪೊಲೀಸ್ ಆಯುಕ್ತರ ಕಚೇರಿಯಿಂದ ಏಪ್ರಿಲ್ 14ರ ವರೆಗೆ ಷರತ್ತುಬದ್ಧ ಪಾಸ್ ನೀಡಲಾಗಿತ್ತು.
ಇದೀಗ ಕೇಂದ್ರ ಸರ್ಕಾರವು ಲಾಕ್‌ಡೌನ್ ಅವಧಿಯನ್ನು ಮೇ 3ರ ವರೆಗೆ ವಿಸ್ತರಣೆ ಮಾಡಿದ್ದರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅತ್ಯವಶ್ಯಕ ವಸ್ತುಗಳ ಸಾಗಣೆ ಹಾಗೂ ಅತ್ಯವಶ್ಯಕ ಕರ್ತವ್ಯಗಳ ಕುರಿತು ಈಗಾಗಲೇ ನೀಡಲಾದ ಪಾಸ್‌ಗಳ ಅವಧಿಯನ್ನೂ ಮೇ 3ರವರೆಗೆ ಮುಂದುವರಿಸಿದ್ದು, ಅದೇ ಪಾಸ್‌ಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಪಾಸ್‌ಗಳಲ್ಲಿ ತಮ್ಮ ಹೆಸರು ನಮೂದಿಸದೆ ಮತ್ತೊಬ್ಬರಿಗೆ ವರ್ಗಾಯಿಸುವುದು, ಹಾಗೂ ಅವುಗಳ ಕಲರ್ ಝೆರಾಕ್ಸ್
ತೆಗೆದು ಬಳಸುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಬೆಳಗಾವಿ ನಗರದ ಸಾರ್ವಜನಿಕರು ಈ ಹಿಂದಿನಿಂದ ಪಾಲಿಸಿಕೊಂಡು ಬರುತ್ತಿರುವ ಲಾಕ್‌ಡೌನ್ ನಿಯಮ ಉಲ್ಲಂಘಿಸದಂತೆ ಹಾಗೂ ಅನವಶ್ಯಕವಾಗಿ ರಸ್ತೆಗಳಲ್ಲಿ ಸಂಚರಿಸದೆ ಮನೆಯಲ್ಲಿಯೇ ಸುರಕ್ಷಿತವಾಗಿ ಇದ್ದು, ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.