

ಕಂಪ್ಲಿ: ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ಎಲ್‌ಎಲ್‌ಸಿ ಕಾಲುವೆಗೆ ಏ.10ರವರೆಗಾದರೂ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಒತ್ತಾಯಿಸಿದರು.
ಗುರುವಾರ ರೈತರ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, 2025ರ ಮಾ.21ರಂದು ನಡೆದ ಐಸಿಸಿ ಸಭೆಯಲ್ಲಿ ಏ.10ರತನಕ ಕುಡಿವನೀರು, ನಿಂತ ಬೆಳೆಗಳ ಸಂರಕ್ಷಣೆಗೆ 450 ಕ್ಯೂಸೆಕ್ ನೀರು ಹರಿಸಲು ನಿರ್ಣಯಿಸಿತ್ತು. 2025ರ ಮಾ.30ರಂದು ಕಲಬುರಗಿ ಆಯುಕ್ತರು ಕುಡಿವ ನೀರು, ನಿಂತ ಬೆಳೆಗಳ ಸಂರಕ್ಷಣೆಗೆ 650 ಕ್ಯೂಸೆಕ್‌ನಂತೆ ಏ.5ರತನಕ ಎಲ್‌ಎಲ್‌ಸಿ ಕಾಲುವೆಗೆ ನೀರು ಹರಿಸುವಂತೆ ಸೂಚಿಸಿದ್ದರು.
ಏ.2ರಂದು ಸಚಿವ ಶಿವರಾಜ ತಂಗಡಗಿ ಅವರು ಬಳ್ಳಾರಿ, ವಿಜಯನಗರ ಜಿಲ್ಲೆಗಳ ರೈತರನ್ನು ಕಡೆಗಣಿಸಿ, ರಾಯಚೂರು, ಕೊಪ್ಪಳ ರೈತರಿಗೆ ಅನುಕೂಲವಾಗುವಂತೆ ಎಡದಂಡೆ ಕಾಲುವೆಗೆ ಮಾತ್ರ ಏ.10ರ ತನಕ 3000 ಕ್ಯೂಸೆಕ್‌ನಂತೆ ನೀರು ಹರಿಸುವ ಮಾಹಿತಿ ನೀಡಿದ್ದಾರೆ. ರೈತರನ್ನು ತಾರತಮ್ಯದಿಂದ ನೋಡುವ ಸಚಿವರ ಮನೋಭಾವ ಸರಿಯಲ್ಲ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ದೂರವಾಣಿ ಕರೆಗೆ ಸಿಗುತ್ತಿಲ್ಲ. ಇದರಿಂದ ರೈತರು ಗೊಂದಲಕ್ಕೀಡಾಗಿದ್ದಾರೆ. ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಕನಿಷ್ಠ ಏ.10ರ ತನಕ ಎಲ್‌ಎಲ್‌ಸಿ ಕಾಲುವೆಗೆ ನೀರು ಹರಿಸಬೇಕು.ಈ ವಿಚಾರವನ್ನು ಶಾಸಕ ಜೆ.ಎನ್.ಗಣೇಶ್ ಗಮನಕ್ಕೂ ತರಲಾಗಿದೆ ಎಂದರು.
ರೈತ ಸಂಘದ ನಗರ ಅಧ್ಯಕ್ಷ ತಿಮ್ಮಪ್ಪನಾಯಕ ಮಾತನಾಡಿ, ಬಳ್ಳಾರಿ ಜಿಲ್ಲಾ ರೈತರು ಭದ್ರಾ ಜಲಾಶಯದ ನೀರನ್ನು ನಂಬಿದ್ದರು. ಆದರೆ ಸಚಿವ ಶಿವರಾಜ ತಂಗಡಗಿ ಅವರು ಬಳ್ಳಾರಿ ಜಿಲ್ಲೆಯ ರೈತರನ್ನು ಕಡೆಗಣಿಸಿ ತಮ್ಮ ಭಾಗದ ರೈತರಿಗೆ ಮಾತ್ರ ಏ.10ರ ತನಕ ನೀರು ಹರಿಸುವ ತೀರ್ಮಾನ ಮಾಡಿದ್ದು ಸರಿಯಲ್ಲ ಎಂದರು.
ಸಭೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಆನಂದರೆಡ್ಡಿ, ತಾಲೂಕು ಅಧ್ಯಕ್ಷ ವಿ.ವೀರೇಶ, ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ಪ್ರಮುಖರಾದ ಆದೋನಿ ರಂಗಪ್ಪ, ಟಿ.ಗಂಗಣ್ಣ, ಮುರಾರಿ, ಕಾಗೆ ಈರಣ್ಣ, ಕೆ.ಅಕ್ಬರ್, ಮಹ್ಮದ್ ತೌಶಿಫ್, ಹೊಸಮುನಿರಾಜಪ್ಪ ಇತರರಿದ್ದರು.