ಯಶ ಕಾಣದ ಕುಡಿಯುವ ನೀರು ಪೂರೈಕೆ

ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ, ವಸತಿ ಯೋಜನೆ ಅನುಷ್ಠಾನದ ಬಗ್ಗೆ ಅಧ್ಯಕ್ಷರು ಮತ್ತು ಪಿಡಿಒಗಳ ಸಭೆ ನಡೆಯಿತು. ಪರಮೇಶ ಕುಮಾರ್, ಶ್ರೀನಿವಾಸ್, ರಾಕೇಶ್ ಇತರರಿದ್ದರು.
ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ, ವಸತಿ ಯೋಜನೆ ಅನುಷ್ಠಾನದ ಬಗ್ಗೆ ಅಧ್ಯಕ್ಷರು ಮತ್ತು ಪಿಡಿಒಗಳ ಸಭೆ ನಡೆಯಿತು. ಪರಮೇಶ ಕುಮಾರ್, ಶ್ರೀನಿವಾಸ್, ರಾಕೇಶ್ ಇತರರಿದ್ದರು.
Published on

ಸೋಮವಾರಪೇಟೆ: ಜಲಜೀವನ್ ಮಿಷನ್ ಹಾಗೂ ಅಮೃತ್ ಯೋಜನೆಯಡಿ ಕುಡಿಯುವ ನೀರು ಸರಬರಾಜು ವಿಫಲವಾಗುತ್ತಿರುವ ಕಾರಣ ಮುಂದೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಸಮಧಾನ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ವಸತಿ ಯೋಜನೆ ಅನುಷ್ಠಾನ ಸಂಬಂಧದ ಸಭೆಯಲ್ಲಿ ಪಿಡಿಒಗಳು ಹಾಗೂ ಗ್ರಾಪಂ ಅಧ್ಯಕ್ಷರು ಸಮಸ್ಯೆ ತೋಡಿಕೊಂಡರು.

ಕೇಂದ್ರ ಸರ್ಕಾರದ ಶುದ್ಧ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕೆಲವು ವರ್ಷಗಳಿಂದ ನಡೆಯುತ್ತಿದೆ. ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಬೇಸಿಗೆ ಪ್ರಾರಂಭವಾಗಿರುವುದರಿಂದ ಕೂಡಲೇ ಯೋಜನೆಯ ಕಾಮಗಾರಿ ಮುಗಿಸಿ ನೀರು ಸರಬರಾಜು ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಬೇಕೆಂದು ತಾಪಂ ಇಒ ಪರಮೇಶ ಕುಮಾರ್ ಅವರಿಗೆ ಅಧ್ಯಕ್ಷರು ಮನವಿ ಮಾಡಿದರು.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೂರು ಮತ್ತು ಯಡವಾರೆ ಗ್ರಾಮಗಳಲ್ಲಿ ಇಂದಿಗೂ ಕಾಮಗಾರಿ ಮುಗಿಸಿಲ್ಲ. ಎರಡು ಕೊಳವೆ ಬಾವಿಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಲೈಪ್‌ಲೈನ್ ಅಳವಡಿಕೆ ಸರಿಯಿಲ್ಲ ಎಂದು ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಸಭೆಯ ಗಮನಕ್ಕೆ ತಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ವಿರೇಂದ್ರ ಮಾತನಾಡಿ, ಮುಂದಿನ ಒಂದು ತಿಂಗಳಿನಲ್ಲಿ ಕಾಮಗಾರಿ ಸಂಪೂರ್ಣಗೊಳಿಸಿ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು. ಬೆಸ್ಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಗಳಲ್ಲಿ ನೀರು ಸೋರುತ್ತಿರುವ ಬಗ್ಗೆ ಅಧ್ಯಕ್ಷರು ಸಭೆಯ ಗಮನಕ್ಕೆ ತಂದರು.

ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ ನಡೆಯುತ್ತಿದೆ. ಇಂದಿಗೂ ಕಾಮಗಾರಿ ಮುಗಿಸಿ ನೀರು ಕೊಟ್ಟಿಲ್ಲ. ನಮಗೆ ಇನ್ನು ಕೇವಲ 6 ತಿಂಗಳು ಮಾತ್ರ ಕಾಲಾವಧಿ ಇದ್ದು, ನಮ್ಮ ಅವಧಿಯಲ್ಲಿ ಯೋಜನೆ ಯಶಸ್ಸನ್ನು ನೋಡುವ ಭಾಗ್ಯ ಇಲ್ಲ ಎಂದು ಪಂಚಾಯಿತಿ ಉಪಾಧ್ಯಕ್ಷ ಚಂದ್ರಮೋಹನ್ ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿರೇಂದ್ರ, ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜೆಜೆಎಂ ಯೋಜನೆಯ ಕಾಮಗಾರಿಗಳು ನಡೆಯುತ್ತಿದ್ದು, ಒಂದೆರಡು ತಿಂಗಳಿನಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಕೇಂದ್ರ ಸರ್ಕಾರ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 303 ಕೋಟಿ ರೂ. ವೆಚ್ಚದ ಬಹು ಗ್ರಾಮ ಯೋಜನೆ ಬೃಹತ್ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಅನುದಾನ ಸಿಗಲಿದೆ. ಈ ಯೋಜನೆ ಕಾರ್ಯಗತವಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಸಭೆಯ ಗಮನಕ್ಕೆ ತಂದರು.

ತಾಪಂ ಇಒ ಪರಮೇಶ ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳ ಕಾರ್ಯ ಪ್ರಮುಖವಾಗಿದೆ. ಕೆಲಸದಲ್ಲಿ ಎಲ್ಲರನ್ನೂ ತೃಪ್ತಿಪಡಿಸಲು ಆಗುವುದಿಲ್ಲ. ತಮಗೆ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡುವ ಮೂಲಕ ಪಂಚಾಯಿತಿಗಳಲ್ಲಿ ಸಮಸ್ಯೆಗಳು ಬಾರದ ಹಾಗೆ ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಶ್ರೀನಿವಾಸ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net