

ರಟ್ಟಿಹಳ್ಳಿ: ತಾಲೂಕಿನ ಪುರದಕೇರಿ ಗ್ರಾಮದಲ್ಲಿನ ಬಸವೇಶ್ವರ ದೇವಸ್ಥಾನ ಹುಂಡಿ ಗುರುವಾರ ಬೆಳಗ್ಗಿನ ಜಾವ ಕದ್ದೊಯ್ದ ಕಳ್ಳರು, ಅದನ್ನು ತೆರೆಯವಲ್ಲಿ ವಿಫಲರಾಗಿ ದೇವಸ್ಥಾನದಿಂದ ಸುಮಾರು 50 ಮೀಟರ್ ದೂರದಲ್ಲಿ ಹುಂಡಿಗೆ ಬೇವಿನಸೊಪ್ಪನ್ನು ಮುಚ್ಚಿ ಪರಾರಿಯಾದ ಘಟನೆ ನಡೆದಿದೆ.
ಗ್ರಾಮದ ತುಂಗಾಭದ್ರಾ ನದಿ ದಂಡೆಯಲ್ಲಿರುವ ಬಸವೇಶ್ವರ ದೇವಸ್ಥಾನದ ಗರ್ಭಗುಡಿ ಗೇಟ್ ಬೀಗ ಮುರಿದು ಸುಮಾರು 2 ಕ್ವಿಂಟಾಲ್ ಭಾರದ ಹುಂಡಿಯನ್ನು ಕಳ್ಳರು ಕಳವು ಮಾಡಿದ್ದಾರೆ. ನಂತರ ಸುಮಾರು ದೂರ ತೆಗೆದುಕೊಂಡು ಹೋಗಿ ಹುಂಡಿಯ 3 ಬೀಗ ಮುರಿಯಲು ಯತ್ನಿಸಿದ್ದಾರೆ. ಬೆಳಗ್ಗಿನ ಜಾವ ಗ್ರಾಮಸ್ಥರ ಓಡಾಟ ಕಂಡ ಕಳ್ಳರು, ಹುಂಡಿಗೆ ಬೇವಿನಸೊಪ್ಪು ಮುಚ್ಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪಿಎಸ್ಐ ಪಿ.ಎಫ್. ನಿರೂಳ್ಳಿ ಭೇಟಿ ನೀಡಿ ಪರಿಶೀಲಿಸಿದ್ದು, ಶ್ವಾನದಳ ಮತ್ತು ಬೆರಳಚ್ಚುಗಾರರ ತಂಡ ಕರೆಸಿ ತನಿಖೆ ಕೈಗೊಂಡಿದ್ದಾರೆ.
ಪ್ರತಿವರ್ಷ ದೇವಸ್ಥಾನದ ಜಾತ್ರಾ ಮಹೋತ್ಸವದ ಬಳಿಕ ಯುಗಾದಿ ಹಬ್ಬದಂದು ಹುಂಡಿ ತೆರೆಯಲಾಗುತ್ತದೆ. ಈ ವರ್ಷ ಹುಂಡಿಯಲ್ಲಿ 1.85 ಲಕ್ಷ ರೂಪಾಯಿ ತೆಗೆಯಲಾಗಿತ್ತು. ಪದೇಪದೆ ದೇವಸ್ಥಾನದ ಹುಂಡಿ ಕಳವು ಮಾಡಲು ಕಳ್ಳರು ಯತ್ನಿಸುತ್ತಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ತನಿಖೆ ಮಾಡಿ ಕಳ್ಳರನ್ನು ಬಂಧಿಸಬೇಕು ಎಂದು ಗ್ರಾಮದ ಶಿವಾನಂದಪ್ಪ ಕಲ್ಲವೀರಪ್ಪನವರ ಹೇಳಿದರು.
ಕಳೆದ ತಿಂಗಳಿನಿಂದ ತಾಲೂಕಿನ ಹಿರೇಕಬ್ಬಾರ, ಚಿಕ್ಕಕಬ್ಬಾರ, ಹಳ್ಳೂರು ಗ್ರಾಮಗಳ ದೇವಸ್ಥಾನದ ಹುಂಡಿಗಳನ್ನು ಕಳವು ಮಾಡಿ ಹಣ ದೋಚಲಾಗಿದೆ. ತಿಂಗಳಲ್ಲಿ ಇದು 4ನೇ ಪ್ರಕರಣವಾಗಿದ್ದು, ಕಳ್ಳರು ದೇವಸ್ಥಾನದ ಹುಂಡಿಗಳನ್ನು ಟಾರ್ಗೆಟ್ ಮಾಡಿದ್ದಾರೆ.
ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ನಾಲ್ಕು ಪ್ರಕರಣದ ತನಿಖೆ ಕೈಗೊಳ್ಳಲಾಗಿದ್ದು, ಕೆಲವು ಸುಳಿವು ಪತ್ತೆಯಾಗಿವೆ. ಶೀಘ್ರವೇ ಕಳ್ಳರನ್ನು ಬಂಧಿಸಲಾಗುವುದು. ಕಮಿಟಿಯವರು ದೇವಸ್ಥಾನದ ಸುತ್ತಮುತ್ತ ಸಿ.ಸಿ .ಕ್ಯಾಮರಾ ಅಳವಡಿಸಬೇಕು. ಪ್ರತಿ ತಿಂಗಳು ಹುಂಡಿ ತೆರೆದು ಹಣವನ್ನು ಬ್ಯಾಂಕ್ನಲ್ಲಿ ಜಮಾ ಮಾಡಬೇಕು ಎಂದು ಪಿ.ಎಸ್ಐ ಪಿಎಫ್. ನಿರುಳ್ಳಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.