ಆಯುಕ್ತರ ವರ್ಗಾವಣೆಗೆ ನಿಲ್ಲದ ಲಾಬಿ, ಎರಡು ಗುಂಪಿನ ರಾಜಕೀಯ

31_GBD_Nagarasabhe
Published on

ಚಿಕ್ಕಬಳ್ಳಾಪುರ: ಗೌರಿಬಿದನೂರು ಪೌರಾಯುಕ್ತೆ ಎಂ.ಡಿ.ಗೀತಾರ ವರ್ಗಾವಣೆಗೆ ಇಲ್ಲಿನ ನಗರಸಭೆಯ ಆಡಳಿತಾರೂಢ ಸದಸ್ಯರು ಮತ್ತೊಮ್ಮೆ ಲಾಬಿ ಪ್ರಾರಂಭಿಸಿದ್ದು ಇದಕ್ಕೆ ಇನ್ನೊಂದು ಗುಂಪು ವಿರುದ್ಧವಾಗಿ ನಿಂತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಕಾಂಗ್ರೆಸ್‌ನ ಸದಸ್ಯರು ನಗರಸಭೆ ಆಯುಕ್ತರ ವರ್ಗಾವಣೆಗೆ ಪ್ರಯತ್ನಿಸಿದ್ದರು. ಪೌರಾಡಳಿತ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಈ ಕುರಿತು ಮನವಿ ಪತ್ರ ನೀಡಿದ್ದರು. ಆದರೆ, ಆಗ ಅವರ ಪ್ರಯತ್ನ ಫಲ ನೀಡಿರಲಿಲ್ಲ. ಈಗ ಮತ್ತೊಮ್ಮೆ ಪೌರಾಯುಕ್ತರ ವರ್ಗಾವಣೆಗೆ ಒತ್ತಡ ತಂತ್ರ ಅನುಸರಿಸಲಾಗುತ್ತಿದೆ.

*ಸಹಿ ಸಂಗ್ರಹ ಅಭಿಯಾನ

ನಗರಸಭೆಯ 31 ಸದಸ್ಯರ ಪೈಕಿ 15 ಸದಸ್ಯರು ಆಯುಕ್ತರ ವರ್ಗಾವಣೆಯ ಸಹಮತದ ಪರವಾಗಿ ಸಹಿ ಸಂಗ್ರಹಿಸಿ, ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಮೂಲಕ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ, ಜೆಡಿಎಸ್ ಹಾಗೂ ಬಿಜೆಪಿಯ 16 ಮಂದಿ ಸದಸ್ಯರು ಆಯುಕ್ತರನ್ನು ಮುಂದುವರಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

*ಶಾಸಕರ ವಿರೋಧ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಈಗ ಅವರದೇ ಪಕ್ಷದ 15 ಮಂದಿ ಸದಸ್ಯರು ಪೌರಾಯುಕ್ತರನ್ನು ವರ್ಗಾವಣೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಪ್ರಸ್ತುತ ನಗರಸಭೆಯಲ್ಲಿ ಚುನಾಯಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲ. ಆಡಳಿತಾಧಿಕಾರಿಯನ್ನೂ ನೇಮಿಸಲಾಗಿದೆ. ಇದೇ ವೇಳೆ ಪೌರಾಯುಕ್ತರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕೇಂದ್ರ ಸ್ಥಾನದಲ್ಲಿ ಉಳಿಯುತ್ತಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ದರ್ಬಾರು ನಡೆಯುತ್ತಿದೆ ಎಂಬ ಆರೋಪಗಳನ್ನು ಹೊರಿಸಿ, ವರ್ಗಾವಣೆಗೆ ಪ್ರಯತ್ನಿಸಲಾಗುತ್ತಿದೆ.

*ಸಮಸ್ಯೆಗಳಿದ್ದಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಇದನ್ನು ಬಿಟ್ಟು ಪ್ರತಿಷ್ಠೆಗಾಗಿ ಹಾಗೂ ಯಾರದ್ದೋ ಚಿತಾವಣೆಯಿಂದ ಅಧಿಕಾರಿಯ ವರ್ಗಾವಣೆಗೆ ಸಹಿ ಸಂಗ್ರಹ ಅಭಿಯಾನ ನಡೆಸುವುದು ಸರಿಯಲ್ಲ. ಜನಸಾಮಾನ್ಯರಿಗೆ ಸ್ಪಂದಿಸದಿರುವ ಗುರುತರ ಆರರೋಪಗಳು ಬಂದಲ್ಲಿ ನಾನೇ ವರ್ಗಾವಣೆ ಮಾಡಿಸುತ್ತೇನೆ. ಈ ಕುರಿತು ಸದಸ್ಯರ ಸಭೆ ಕರೆದು ಮುಕ್ತವಾಗಿ ಚರ್ಚಿಸುತ್ತೇನೆ.

ಕೆ.ಎಚ್.ಪುಟ್ಟಸ್ವಾಮಿ ಗೌಡ, ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net