ತ್ಯಾಮಗೊಂಡ್ಲಲ್ಲಿ ಸಲ್ಲಿಕೆಯಾಗದ ನಾಮಪತ್ರ, ಗ್ರಾಮಸ್ಥರಿಂದ ಗ್ರಾಪಂ ಚುನಾವಣೆ ಬಹಿಷ್ಕಾರ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಆಗ್ರಹ

photo tgl 1(11.12.2020) gp election boycott tgl
Published on

ತ್ಯಾಮಗೊಂಡ್ಲು: ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕರಿಸುವ ಗ್ರಾಮಸ್ಥರ ನಿರ್ಧಾರ ಅಚಲವಾಗಿದ್ದು, ಯಾರೊಬ್ಬರೂ ನಾಮಪತ್ರ ಸಲ್ಲಿಸದೆ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ.

ಗ್ರಾಪಂ ಅನ್ನು ಪಪಂ ಆಗಿ ಮೇಲ್ದರ್ಜೆಗೇರಿಸುವಂತೆ ಹಲವು ವರ್ಷಗಳಿಂದಲೂ ಒತ್ತಾಯಿಸುತ್ತಿದ್ದೇವೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ, ಇದಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ, ಗ್ರಾಪಂ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಲಾಗಿತ್ತು. ಅದರಂತೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ ಎಂದು ಗ್ರಾಮಸ್ಥರು ಹೇಳಿದರು.

ಚುನಾವಣೆಯ ಮೊದಲ ಹಂತದಲ್ಲಿ ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿದ್ದ ಶುಕ್ರವಾರ ಬೆಳಗ್ಗೆಯೇ ಜಿಲ್ಲಾಡಳಿತದಿಂದ ಉಪ ವಿಭಾಗಾಧಿಕಾರಿ ಅರುಣ್‌ಕುಮಾರ್ ಹಾಗೂ ತಾಲೂಕು ಆಡಳಿತದಿಂದ ತಹಸೀಲ್ದಾರ್ ಎಂ. ಶ್ರೀನಿವಾಸ್ ಕಂದಾಯ ಅಧಿಕಾರಿಗಳ ಮೂಲಕ ತ್ಯಾಮಗೊಂಡ್ಲು ಗ್ರಾಮಸ್ಥರ ಸಭೆ ಆಯೋಜಿಸಲು ಯತ್ನಿಸಿದರು. ಆದರೆ ಗ್ರಾಮದ ಮುಖಂಡರು ಇದಕ್ಕೆ ಸ್ಪಂದಿಸಲಿಲ್ಲ. ಪಪಂ ಆಗಿ ಮೇಲ್ದರ್ಜೆಗೇರಿಸುವಂತೆ ಇಲಾಖೆಯಿಂದ ಶಿಾರಸು ಮಾಡಲಾಗುವುದು. ಈಗ ನಾಮಪತ್ರ ಸಲ್ಲಿಸಿ ಎಂದು ಗ್ರಾಪಂ ಕಾರ್ಯಾಲಯದ ಬಳಿ ಸೇರಿದ ಮುಖಂಡರ ಬಳಿ ಅಧಿಕಾರಿಗಳು ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ.

ಪಪಂ ಆಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿರುವ ವಕೀಲ ವೆಂಕಟೇಶ್ ಎಚ್. ದೊಡ್ಡೇರಿ ಮಾತನಾಡಿ, ಚುನಾವಣೆ ಬಹಿಷ್ಕಾರ ನೋವಿನ ಸಂಗತಿ. ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸದಿದ್ದರೆ ಸರ್ಕಾರದ ತೀರ್ಮಾನಕ್ಕೆ ಅಸಹಕಾರ ತೋರಿ, ಚುನಾವಣೆಯನ್ನೇ ಬಹಿಷ್ಕರಿಸುವ ಮೂಲಕ ತಿರುಗೇಟು ನೀಡಿರುವುದು ಪ್ರಜಾಪ್ರಭುತ್ವದ ಸುಂದರ ಉದಾಹರಣೆ ಎಂದರು.

ಪಟ್ಟಣ ಪಂಚಾಯಿತಿಯಾಗಲು ಎಲ್ಲ ಅರ್ಹತೆ ಹೊಂದಿರುವ ತ್ಯಾಮಗೊಂಡ್ಲು ಇನ್ನೂ ಗ್ರಾಪಂ ಆಗಿರುವುದು ದುರದೃಷ್ಟಕರ. ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ವಿಶೇಷ ಲೇಖನದಿಂದ ಈ ಅನ್ಯಾಯ ಬೆಳಕಿಗೆ ಬಂದಿತು. ಇದಕ್ಕಾಗಿ ವಿಜಯವಾಣಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.

ಎಲ್ಲ ಪಕ್ಷದವರ ಸಂಘಟಿತ ಹೋರಾಟದಿಂದ ಉತ್ತಮ ಫಲಿತಾಂಶ ಸಿಗುವ ನಿರೀಕ್ಷೆಯಿದೆ. ಜನವರಿಯಲ್ಲಿ ಸರ್ಕಾರದಿಂದ ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕಾಗಿದೆ. ಈ ಸಂದರ್ಭದಲ್ಲಿ ಚುನಾವಣೆ ಬಹಿಷ್ಕರಿಸಿರುವ ಮಾಹಿತಿಯನ್ನೂ ಒದಗಿಸಬೇಕಾಗುತ್ತದೆ. ಮುಂದಿನ ಕೆಲವು ತಿಂಗಳಲ್ಲಿ ಸರ್ಕಾರದಿಂದ ಪಪಂ ಆಗಿ ಮೇಲ್ದರ್ಜೆಗೇರಿಸುವ ಆದೇಶ ಲಭಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು. ಚುನಾವಣೆಯಲ್ಲಿ ಮಾತ್ರ ರಾಜಕೀಯ. ನಂತರ ನಾವೆಲ್ಲರೂ ಒಂದೇ. ಪಟ್ಟಣದ ಪ್ರಶ್ನೆ ಬಂದಾಗ ಸಂಘಟಿತ ಹೋರಾಟಕ್ಕೆ ಬದ್ಧ ಎಂದು ಎಲ್ಲ ಪಕ್ಷಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net