

ಹೊಸಪೇಟೆ: ನಗರದಲ್ಲಿ ಶುಕ್ರವಾರ ತಾಪಮಾನ ಏರಿಕೆಯಾಗಿ ಸುಡುವ ವಾತಾವರಣ ಸೃಷ್ಟಿಯಾಗುವ ಹೊತ್ತಿನಲ್ಲೇ ದಿಢೀರ್ ಮಳೆ ಸುರಿದು ವಾತಾವರಣ ತಂಪಾಗಿಸಿದೆ.
ಕೆಲಕಾಲ ಮಳೆ ಬಂದು ನಂತರ ತಾಪಮಾನ ಕ್ರಮೇಣವಾಗಿ ಏರಿ ಸೆಕೆ ಹೆಚ್ಚತೊಡಗಿತ್ತು. ಹಿಂದಿನ ದಿನವಾದ ಗುರುವಾರ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗಿ 35 ಡಿಗ್ರಿ ಸೆಲ್ಸಿಯಸ್‌ಗೆ ಮುಟ್ಟಿ ಸೆಕೆ ಅಧಿಕವಾಗಿತ್ತು. ಶುಕ್ರವಾರವೂ ಮಧ್ಯಾಹ್ನದವರೆಗೆ ತಾಪಮಾನ ಜೋರಾಗಿತ್ತು. ಸಂಜೆ ಮೋಡ ಕವಿದ ವಾತಾವರಣ ಕಂಡುಬಂದಿದ್ದರಿಂದ ಸೆಕೆಯಿಂದ ಬಳಲುತ್ತಿದ್ದ ಜನರು ಸ್ವಲ್ಪ ನಿರಾಳರಾದರು. ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆ ಸುರಿಯಿತು. ನಗರದಲ್ಲಿ ಶುಕ್ರವಾರ ಅಕಾಲಿಕ ಮಳೆ ಸುರಿದು ಕೆಲ ಕಾಲ, ಜನಜೀವನ ಅಸ್ತವ್ಯಸ್ತಗೊಂಡಿತು. ಬೇಸಿಗೆಯ ಬಿಸಿಲಿಗೆ ಬಳಲಿದ ಜನರಿಗೆ ಮಳೆ ತೆಂಪೆರೆಯಿತು. ಬೆಳಿಗ್ಗೆಯಿಂದ ರಣಬಿಸಿಲು ಇತ್ತು. ಮಧ್ಯಾಹ್ನ ಏಕಾಏಕಿ ದಟ್ಟ ಕಾರ್ಮೋಡ ಆವರಿಸಿಕೊಂಡು, ಕೆಲಕಾಲ ಮಳೆ ಸುರಿಯಿತು.
ನಗರದಲ್ಲಿ ಅಕಾಲಿಕ ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿತ್ತು. ಕೆಲವು ದಿನಗಳಿಂದ ತಾಪಮಾನ 39ರಿಂದ 40 ಡಿಗ್ರಿ ಸೆಲ್ಸಿಯಸ್ ಇರುತ್ತಿದ್ದು, ಕೆಂಡದಂತಹ ಬಿಸಿಲಿನಿಂದ ಜನ ಕಂಗೆಟ್ಟಿದ್ದರು. ವರ್ಷದ ಮೊದಲ ಮಳೆಯ ಸಿಂಚನದಿಂದ ಜನ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.