ತಾಪ ತಗ್ಗಿಸಿದ ಅಕಾಲಿಕ ಮಳೆ

Srt kapatagudda
Published on

ಶಿರಹಟ್ಟಿ: ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದ ಕಾದು ಕೆಂಡವಾಗಿದ್ದ ಭೂಮಿ ತಂಪಾಗಿದೆ. ಅದೇ ರೀತಿ ಒಣಗುತ್ತಿದ್ದ ಗಿಡ-ಮರಗಳಲ್ಲಿ ಮತ್ತೆ ಹಸಿರು ಚಿಗುರುತ್ತಿದೆ.

ಬಿಸಿಲಿಗೆ ಕಪ್ಪತಗುಡ್ಡ, ಕಡಪಟ್ಟಿ, ಹುಲಿಕಲ್ಲು ಅಡವಿಗಳಲ್ಲಿ ಮರಗಳು ಬಿಸಿಲಿನ ಆರ್ಭಟಕ್ಕೆ ನಲುಗಿದ್ದವು. ಅರಣ್ಯ ಸಂಪತ್ತೆಲ್ಲ ಒಣಗಿತ್ತು. ನೀರಿಲ್ಲದೆ ವನ್ಯಜೀವಿಗಳು, ಜಾನು ವಾರುಗಳು ಸಂಕಷ್ಟ ಕ್ಕೀಡಾಗಿದ್ದವು. ತಾಪಮಾನ 40 ಡಿ.ಸೆ ತಲುಪಿತ್ತು. ಕಾಡಂಚಿನ ಜನರಲ್ಲಿ ಆತಂಕವೂ ಹೆಚ್ಚಾಗಿತ್ತು. ವಾರದಿಂದ ಆಗಾಧವಾಗಿ ಸುರಿದ ಮಳೆ ಈ ಆತಂಕವನ್ನು ಕರಗಿಸಿದೆ.

ಶಿರಹಟ್ಟಿ ತಾಲೂಕಲ್ಲಿ ವಾರದಿಂದ ಮಳೆ ಉತ್ತಮವಾಗಿ ಸುರಿಯುತ್ತಿದೆ. ಎಲ್ಲೆಡೆ ಒಣಗಿ ನಿಂತಿದ್ದ ಮರ-ಗಿಡಗಳೆಲ್ಲ ಚಿಗುರುತ್ತಿವೆ. ಕೆರೆ-ಕಟ್ಟೆಗಳಲ್ಲಿ ಅಲ್ಪ ನೀರು ಸಂಗ್ರಹವಾಗುತ್ತಿದೆ. ಕಾಡಿನಲ್ಲಿನ ವನ್ಯಜೀವಿಗಳಿಗೆ ಕುಡಿಯಲು ನೀರು ಸಿಗುತ್ತಿದೆ.

ಕಪ್ಪತಗುಡ್ಡದ ತಪ್ಪಲಿನಲ್ಲಿ ಬೆಂಕಿ ಅವಘಡ ಸಂಭವಿಸಿ ನೂರಾರು ಎಕರೆ ವನ ಸಂಪತ್ತು ಸುಟ್ಟು ಹೋಗಿತ್ತು. ಮಳೆಯಿಂದಾಗಿ ಅಪಾಯ ತಾತ್ಕಾಲಿಕವಾಗಿ ದೂರವಾಗಿದೆ.

ಇತ್ತೀಚೆಗೆ ಸುರಿದ ಮಳೆಯಿಂದ ಪರಿಸ್ಥಿತಿ ಹಿತಕರವಾಗಿದೆ. ಬೆಂಕಿ ಅಪಾಯ ಇಲ್ಲದ ಮಟ್ಟಿಗೆ ತೇವಾಂಶ ಕಾಡಿನಲ್ಲಿ ಕಂಡುಬರುತ್ತಿದೆ. ಹವಾಮಾನ ಇಲಾಖೆ ಪ್ರಕಾರ ಇನ್ನೂ ಕೆಲ ದಿನಗಳಲ್ಲೆ ಮಳೆ ಆಗುವ ಸಾಧ್ಯತೆಯಿದೆ. ಇದು ನಮ್ಮ ಕಾರ್ಯಚಟುವಟಿಕೆಗೆ ಸಹಕಾರಿಯಾಗಲಿದೆ ಎನ್ನುತ್ತಾರೆ ಶಿರಹಟ್ಟಿ ಅರಣ್ಯ ವಲಯಾಧಿಕಾರಿ ರಾಮಪ್ಪ ಪೂಜಾರಿ ಮಾಹಿತಿ ನೀಡಿದರು.

ಬೇಸಿಗೆಯಲ್ಲಿ ಕೆರೆಗಳು ಬತ್ತಿ, ಜಿಂಕೆಗಳು ನೀರು ಮತ್ತು ಆಹಾರ ಅರಸಿ ಹೊಲಗಳತ್ತ ಮುಖ ಮಾಡಿದ್ದವು. ಕಳೆದೊಂದು ವಾರದಿಂದ ಸುರಿಯು ತ್ತಿರುವ ಮಳೆಯಿಂದ ಅರಣ್ಯ ದಲ್ಲಿ ಮರ-ಗಿಡಗಳು ಮತ್ತೆ ಚಿಗುರೊಡೆದು ನವ ಚೈತನ್ಯ ಪಡೆಯುತ್ತಿವೆ. ಕೆರೆ-ಕಟ್ಟೆಗಳಲ್ಲಿ ನೀರು ತುಂಬಿಕೊಳ್ಳುತ್ತಿವೆ. ಬೆಂಕಿ ಅಪಾಯ ಕಡಿಮೆಯಾಗಿದ್ದು, ಅರಣ್ಯ ಇಲಾಖೆಯ ಕೆಲಸ ಹಗುರವಾಗಿಸಿದೆ. | ರಾಮಪ್ಪ ಪೂಜಾರಿ ವಲಯ ಅರಣ್ಯಾಧಿಕಾರಿ, ಶಿರಹಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net